
ಗದಗ, 11 ಜನವರಿ (ಹಿ.ಸ.) :
ಆ್ಯಂಕರ್ : ಗಾಣಿಗ ಸಮಾಜವು ಕಠಿಣ ಶ್ರಮ, ಕಾಯಕ ನಿಷ್ಠೆ, ಸ್ವಾಭಿಮಾನ ಹಾಗೂ ವೈಚಾರಿಕ ಚಿಂತನೆಗಳನ್ನು ಜೀವನದ ಭಾಗವಾಗಿಸಿಕೊಂಡು ಸಮಾಜದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದಿದೆ. ಈ ಮೌಲ್ಯಗಳನ್ನು ಮುಂದಿನ ಪೀಳಿಗೆಯಲ್ಲಿಯೂ ಬೆಳೆಸುವ ಮೂಲಕ ಸಮಾಜಕ್ಕೆ ಕೀರ್ತಿ ತರುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಟಗೌಡ ಪಾಟೀಲ ಹೇಳಿದರು.
ನಗರದ ಹಾತಲಗೇರಿ ರಸ್ತೆಯ ವಿವೇಕಾನಂದ ನಗರದಲ್ಲಿರುವ ಗಾಣಿಗ ಸಮಾಜ ಭವನದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ 20 ಲಕ್ಷ ರೂ. ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾದ ಊಟದ ಕೊಠಡಿ, ಕಟ್ಟಡದ ಮೇಲ್ಚಾವಣಿಯಲ್ಲಿ ಅಳವಡಿಸಲಾದ ಸೋಲಾರ್ ವಿದ್ಯುತ್ ಘಟಕ ಉದ್ಘಾಟನೆ ಹಾಗೂ 2026ನೇ ಸಾಲಿನ ದಿನದರ್ಶಿಕೆ (ಕ್ಯಾಲೆಂಡರ್) ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಣಿಗ ಸಮಾಜವು ವೃತ್ತಿಯನ್ನು ಅವಲಂಬಿಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಉನ್ನತ ಮಟ್ಟಕ್ಕೇರಿದ ಸಮಾಜವಾಗಿದೆ. ಪರಿಶುದ್ಧ ಗಾಣದ ಎಣ್ಣೆಯನ್ನು ಉತ್ಪಾದಿಸುವ ಮೂಲಕ ಸಮಾಜದ ಆರೋಗ್ಯ ಕಾಪಾಡುವ ಮಹತ್ವದ ಜವಾಬ್ದಾರಿಯನ್ನು ಈ ಸಮುದಾಯ ಹೊತ್ತುಕೊಂಡಿದೆ. ಇಂತಹ ಸಮಾಜವು ತನ್ನ ಸಂಸ್ಕಾರ, ಶಿಸ್ತು ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಹಿರಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜೀವನದ ನೋವು–ನಲಿವುಗಳನ್ನು ಕಂಡು ಅನುಭವ ಹೊಂದಿರುವ ಹಿರಿಯರ ಮಾರ್ಗದರ್ಶನವನ್ನು ಯುವಪೀಳಿಗೆ ನಿರ್ಲಕ್ಷಿಸದೆ ಪಾಲಿಸಬೇಕು. ಹಿರಿಯರ ಅನುಭವದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯುವಕರು ಬದುಕಿನಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯ ಎಂದು ಕೃಷ್ಟಗೌಡ ಪಾಟೀಲ ಹೇಳಿದರು.
ಜಿಲ್ಲೆಯಲ್ಲಿ ಗಾಣಿಗ ಸಮಾಜ ಭವನವೇ ಮಾದರಿ
ಜಿಲ್ಲೆಯಲ್ಲಿ ವಿವಿಧ ಸಮಾಜಗಳ ಭವನಗಳನ್ನು ನೋಡಿದರೆ, ಗಾಣಿಗ ಸಮಾಜ ಭವನವು ವಿಶಾಲತೆ, ಸೌಂದರ್ಯ ಮತ್ತು ಸೌಲಭ್ಯಗಳ ದೃಷ್ಟಿಯಿಂದ ಮಾದರಿಯಾಗಿದೆ. ಇಂತಹ ಸುಸಜ್ಜಿತ ಭವನದಲ್ಲಿ ಹೆಚ್ಚಿನ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಸಮಾಜದ ಒಗ್ಗಟ್ಟು ಇನ್ನಷ್ಟು ಗಟ್ಟಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಗಾಣಿಗ ಸಮಾಜಕ್ಕೆ ನಮ್ಮ ಕುಟುಂಬದೊಂದಿಗೆ ಹಿಂದಿನಿಂದಲೂ ಅವಿನಾಭಾವ ಸಂಬಂಧ ಇದೆ. ಸಮಾಜವು ನಮ್ಮ ಕಾರ್ಯಗಳಿಗೆ ಹೆಗಲಿಗೆ ಹೆಗಲು ಕೊಟ್ಟು ಶಕ್ತಿ ತುಂಬಿದೆ. ರಾಜಕೀಯವಾಗಿ ಸಹ ಗಾಣಿಗ ಸಮಾಜವು ನಮ್ಮ ಮನೆತನಕ್ಕೆ ಸದಾ ಬೆಂಬಲ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಸಹಕಾರ, ಬೆಂಬಲ ನೀಡುವಂತೆ ಮನವಿ ಮಾಡಿದರು. ಯುವ ನಾಯಕರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದರು. ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ಜಿಲ್ಲಾ ಅಧ್ಯಕ್ಷ ಬಸವರಾಜ ಬಿಂಗಿ ಮಾತನಾಡಿ, ದಾನಿಗಳ ಸಹಕಾರದಿಂದ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದ್ದು, ಶಾಸಕರ ಅನುದಾನದಲ್ಲಿ ಊಟದ ಕೊಠಡಿ ನಿರ್ಮಾಣ ಮಾಡಲಾಗಿದೆ. ಕಡಿಮೆ ವೆಚ್ಚದಲ್ಲಿ ಅಚ್ಚುಕಟ್ಟಾಗಿ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಗಾಣಿಗ ಸಮಾಜದ ಮುಖಂಡ ದಶರಥ ಗಾಣಿಗೇರ ಮಾತನಾಡಿ, ಸಮಾಜದ ಒಗ್ಗಟ್ಟು ಮತ್ತಷ್ಟು ಬಲಪಡಿಸಬೇಕಾಗಿದೆ. ಸಮಾಜ ಯಾವುದೇ ತೀರ್ಮಾನ ಕೈಗೊಂಡರೂ ಎಲ್ಲರೂ ಒಂದಾಗಿ ನಿಂತು ಅನುಸರಿಸಬೇಕು ಎಂದು ಕರೆ ನೀಡಿದರು.
ಕೆಇಬಿ ಇಲಾಖೆಯ ಅಧಿಕಾರಿ ಜವಳಿ ಹಾಗೂ ಸೋಲಾರ್ ಕಂಪನಿಯ ಮ್ಯಾನೇಜರ್ ಶ್ರೀನಿವಾಸ ಮಂಟೂರ ಕಾರ್ಯಕ್ರಮದಲ್ಲಿ ಮಾತನಾಡಿ, ಸೋಲಾರ್ ವಿದ್ಯುತ್ ಘಟಕದ ಉಪಯೋಗ ಮತ್ತು ಅದರ ಲಾಭಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ 2026ನೇ ಸಾಲಿನ ನೂತನ ಕ್ಯಾಲೆಂಡರ್ ಅನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಷಣ್ಮುಖಪ್ಪ ಬಡ್ನಿ, ಬಿ.ಬಿ. ಐನಾಪೂರ, ಮುರುಘರಾಜೇಂದ್ರ ಬಡ್ನಿ, ಗಾಣಿಗ ಸಮಾಜದ ಮುಖಂಡರಾದ ಅಶೋಕ ಮಂದಾಲಿ, ಸುರೇಶ ಮರಳಪ್ಪನವರ, ಬಸವರಾಜ ಮೇಟಿ, ಗಿರಿಯಪ್ಪ ಅಸೂಟಿ, ಗಂಗಾಧರ ಗಾಣಿಗೇರ, ರಮೇಶ ಮಂದಾಲಿ, ಹಾಲಪ್ಪ ಲಕ್ಕುಂಡಿ (ಬಣವಿ), ಫಕ್ಕೀರೇಶ ಸಿಂಧಗಿ, ಬಸವರಾಜ ಸುಂಕದ, ಶರಣಗೌಡ ಪವಾಡಿಗೌಡ್ರು, ಬಿ.ಎಸ್. ವಡವಟ್ಟಿ, ನಿಂಗಪ್ಪ ಕೆಂಗಾರ, ಅಮರೇಶ ಹಾದಿ, ಶ್ರೀಕಾಂತ ಲಕ್ಕುಂಡಿ, ಪ್ರಭುರಾಜ ಬಿಂಗಿ, ಹನಮಂತಗೌಡ ದೊಡ್ಡಗೌಡ್ರ, ಐ.ಎಂ. ಕಿರೇಸೂರ, ಬಸವಂತಪ್ಪ ನವಲಳ್ಳಿ, ಬಸವರಾಜ ನವಲಗುಂದ, ತೋಟಪ್ಪ ಗಾಣಿಗೇರ, ಶಿವಣ್ಣ ಹಿಟ್ಟಳ್ಳಿ, ಸೋಮನಗೌಡ ಪಾಟೀಲ, ಪ್ರಕಾಶ ಮುಧೋಳ, ಜಗದೀಶ ಬೆಳವಟಗಿ, ಪುಲಕೇಶಗೌಡ ಪಾಟೀಲ, ಸಂದೀಪ ಕಪ್ಪತ್ತನವರ, ಎಚ್.ಬಿ. ಕೊರಗಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಮಾಜದ ಒಗ್ಗಟ್ಟು, ಸಂಸ್ಕಾರ ಮತ್ತು ಅಭಿವೃದ್ಧಿಯ ಸಂದೇಶ ನೀಡುವ ಮೂಲಕ ಯಶಸ್ವಿಯಾಗಿ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / lalita MP