
ಗದಗ, 11 ಜನವರಿ (ಹಿ.ಸ.) :
ಆ್ಯಂಕರ್ : ಐತಿಹಾಸಿಕ ಹಿನ್ನಲೆ ಹೊಂದಿರುವ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ವೇಳೆ ಪತ್ತೆಯಾಗಿದ್ದ ಚಿನ್ನದ ನಿಧಿ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಮೊದಲಿಗೆ ನಿಧಿ ಪತ್ತೆಯಾಗಿದೆ ಎಂದು ಸಂಚಲನ ಮೂಡಿಸಿದ್ದ ಘಟನೆ, ಇದೀಗ ಪುರಾತತ್ವ ಇಲಾಖೆಯ ಸ್ಪಷ್ಟನೆಯೊಂದಿಗೆ ‘ನಿಧಿ ಅಲ್ಲ’ ಎಂಬ ಹೇಳಿಕೆಗೆ ತಲುಪಿದ್ದು, ಚಿನ್ನ ಹಸ್ತಾಂತರಿಸಿದ್ದ ಕುಟುಂಬ ಇದೀಗ ತಮ್ಮ ಆಭರಣಗಳನ್ನು ವಾಪಸ್ ನೀಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿದೆ.
11 ಮತ್ತು 12ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ಲಕ್ಕುಂಡಿ ಗ್ರಾಮವು, ಇತಿಹಾಸದ ಪುಟಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಗ್ರಾಮದಲ್ಲಿ 101 ದೇವಸ್ಥಾನಗಳು, 101 ಬಾವಿಗಳು ಇದ್ದವು ಎನ್ನುವ ಇತಿಹಾಸ ಪ್ರಸಿದ್ಧಿಯ ಜೊತೆಗೆ, ಚಾಲುಕ್ಯರ ಕಾಲದಲ್ಲಿ ಇಲ್ಲಿಯೇ ಟಂಕಸಾಲೆ (ನಾಣ್ಯ ತಯಾರಿಕಾ ಕೇಂದ್ರ) ಕಾರ್ಯನಿರ್ವಹಿಸಿತ್ತು ಎಂಬ ದಾಖಲೆಗಳಿವೆ. ಈ ಹಿನ್ನೆಲೆ ಲಕ್ಕುಂಡಿಯಲ್ಲಿ ಚಿನ್ನ ಹಾಗೂ ನಿಧಿ ಇದೆ ಎನ್ನುವ ಮಾತುಗಳು ಹಿಂದಿನಿಂದಲೂ ಕೇಳಿ ಬರುತ್ತಿದ್ದವು.
ಈ ನಡುವೆ ಲಕ್ಕುಂಡಿ ಗ್ರಾಮದ ಕಸ್ತೂರಿ ರಿತ್ತಿ ಕುಟುಂಬವು ತಮ್ಮ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಕಾರ್ಯ ಕೈಗೊಂಡಿತ್ತು. ಮನೆಯ ಪಾಯ ಮುಚ್ಚುವ ವೇಳೆ ತಾಮ್ರದ ಮಡಿಕೆಯಲ್ಲಿ ಚಿನ್ನದ ಆಭರಣಗಳು ಪತ್ತೆಯಾಗಿದ್ದು, ಈ ವಿಚಾರ ಗ್ರಾಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಪತ್ತೆಯಾದ ಸುಮಾರು 466 ಗ್ರಾಂ ಚಿನ್ನದ ಆಭರಣಗಳನ್ನು ರಿತ್ತಿ ಕುಟುಂಬ ಪ್ರಾಮಾಣಿಕವಾಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಮಾದರಿ ನಡೆ ತೋರಿಸಿತ್ತು.
ಕುಟುಂಬದ ಈ ನಡೆಗೆ ಸಾರ್ವಜನಿಕರಿಂದ ಹಾಗೂ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಪ್ರಕರಣಕ್ಕೆ ಮರುದಿನವೇ ಹೊಸ ತಿರುವು ಸಿಕ್ಕಿದೆ.
ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ರಮೇಶ ಮೂಲಿಮನಿ ಅವರು ಚಿನ್ನ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದು ನಿಧಿ ಎಂದು ಹೇಳಲು ಯಾವುದೇ ಸ್ಪಷ್ಟ ಪುರಾತತ್ವ ಪುರಾವೆಗಳು ಇಲ್ಲ. ಬಂಗಾರ ಮನೆಯಲ್ಲಿ ಸಿಕ್ಕಿದ್ದರೆ ಅದು ಆ ಮನೆಯವರದೇ ಆಗಿರಬಹುದು. ಪತ್ತೆಯಾದ ಆಭರಣಗಳನ್ನು ಗಮನಿಸಿದರೆ ಅವು ಬಹಳಷ್ಟು ಹಾನಿಗೊಳಗಾಗಿದ್ದು, ಮೇಲ್ನೋಟಕ್ಕೆ ಕುಟುಂಬದ ಪೂರ್ವಜರ ಆಭರಣಗಳೇ ಆಗಿರುವ ಶಂಕೆ ಇದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪುರಾತತ್ವ ಇಲಾಖೆಯ ಈ ಹೇಳಿಕೆಯೊಂದಿಗೆ ಪ್ರಕರಣ ಸಂಪೂರ್ಣ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಸರ್ಕಾರಕ್ಕೆ ಚಿನ್ನವನ್ನು ಹಸ್ತಾಂತರಿಸಿದ್ದ ರಿತ್ತಿ ಕುಟುಂಬ ಇದೀಗ, “ಇದು ನಿಧಿ ಅಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ. ಹಾಗಿದ್ದರೆ ಇದು ನಮ್ಮ ಪೂರ್ವಜರ ಆಸ್ತಿ. ನಮ್ಮ ಚಿನ್ನವನ್ನು ನಮಗೆ ವಾಪಸ್ ನೀಡಬೇಕು” ಎಂದು ಪಟ್ಟು ಹಿಡಿದಿದೆ.
ಪತ್ತೆಯಾದ ಚಿನ್ನಾಭರಣಗಳಲ್ಲಿ ಸುಮಾರು 60 ರಿಂದ 70 ಲಕ್ಷ ರೂಪಾಯಿ ಮೌಲ್ಯದ ಕಂಠಹಾರ, ಕುತ್ತಿಗೆ ಸರ, ದೊಡ್ಡ ತೊಡೆಹಾರ, ಗುಂಡುಗಳು, ವಂಕಿ ಉಂಗುರ, ಕಿವಿಯೋಲೆ, ನಾಗಮುದ್ರೆ, ನಾಗಮಣಿ, ವಿವಿಧ ಸರಗಳು, ಬಳೆಗಳು, ಕಾಲ್ಗೆಜ್ಜೆ, 22 ತೂತು ಬಿಲ್ಲೆಗಳು, ಬಾಜುಬಂಧ್ ಸೇರಿದಂತೆ ಅಪಾರ ಪ್ರಮಾಣದ ಪುರಾತನ ಆಭರಣಗಳು ಸೇರಿವೆ. ಈ ಆಭರಣಗಳ ವಿನ್ಯಾಸ ಮತ್ತು ಸ್ಥಿತಿಯನ್ನು ಗಮನಿಸಿದರೆ, ಅವು ಕುಟುಂಬದ ಪೂರ್ವಜರಿಗೆ ಸೇರಿದವು ಎನ್ನುವ ಅಭಿಪ್ರಾಯವನ್ನು ಅಧಿಕಾರಿಗಳೇ ವ್ಯಕ್ತಪಡಿಸಿರುವುದು ಕುಟುಂಬದ ವಾದಕ್ಕೆ ಬಲ ನೀಡಿದೆ.
ಒಂದು ಕಡೆ ಲಕ್ಕುಂಡಿಯಂತಹ ಐತಿಹಾಸಿಕ ಗ್ರಾಮದಲ್ಲಿ ಚಿನ್ನದ ನಿಧಿ ಪತ್ತೆಯಾಗಿದೆ ಎಂದು ಸುದ್ದಿಯಾಗಿದ್ದ ಪ್ರಕರಣ, ಮತ್ತೊಂದೆಡೆ ‘ಇದು ನಿಧಿ ಅಲ್ಲ’ ಎಂಬ ಪುರಾತತ್ವ ಇಲಾಖೆಯ ಸ್ಪಷ್ಟನೆಯಿಂದ ಹೊಸ ಚರ್ಚೆಗೆ ಕಾರಣವಾಗಿದೆ. ಜಿಲ್ಲಾಡಳಿತ ಈಗ ಯಾವ ತೀರ್ಮಾನ ಕೈಗೊಳ್ಳಲಿದೆ? ಚಿನ್ನವನ್ನು ಕುಟುಂಬಕ್ಕೆ ವಾಪಸ್ ನೀಡಲಾಗುತ್ತದೆಯೇ? ಅಥವಾ ಸರ್ಕಾರದ ವಶದಲ್ಲೇ ಉಳಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಒಟ್ಟಿನಲ್ಲಿ, ಲಕ್ಕುಂಡಿಯ ಚಿನ್ನದ ಪ್ರಕರಣ ಇದೀಗ ಕಾನೂನು ಹಾಗೂ ಆಡಳಿತಾತ್ಮಕ ತೀರ್ಮಾನಗಳತ್ತ ಮುಖ ಮಾಡಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಜಿಲ್ಲೆಯ ಜನರ ಗಮನ ನೆಟ್ಟಿದೆ.
ಹಿಂದೂಸ್ತಾನ್ ಸಮಾಚಾರ್ / lalita MP