ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿ ಅನಾವರಣಕ್ಕೆ ಸಿದ್ಧತೆ
ಗದಗ, 11 ಜನವರಿ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿ ಅನಾವರಣ ಮಾಡಬೇಕೆಂಬ ದಲಿತ ಸಮುದಾಯ ಹಾಗೂ ಅಂಬೇಡ್ಕರ ಅಭಿಮಾನಿಗಳ ಹಲವು ವರ್ಷಗಳ ಕನಸು ಶೀಘ್ರದಲ್ಲೇ ನನಸಾಗುವ ಕಾಲ ಕೂಡಿ
ಫೋಟೋ


ಗದಗ, 11 ಜನವರಿ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿ ಅನಾವರಣ ಮಾಡಬೇಕೆಂಬ ದಲಿತ ಸಮುದಾಯ ಹಾಗೂ ಅಂಬೇಡ್ಕರ ಅಭಿಮಾನಿಗಳ ಹಲವು ವರ್ಷಗಳ ಕನಸು ಶೀಘ್ರದಲ್ಲೇ ನನಸಾಗುವ ಕಾಲ ಕೂಡಿ ಬಂದಿದೆ. ಈ ಹಿನ್ನೆಲೆಯಲ್ಲಿ ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಮುಖಂಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಡಾ. ಅಂಬೇಡ್ಕರ ಪುತ್ಥಳಿಯನ್ನು ಜನವರಿ ತಿಂಗಳಲ್ಲಿ ಅಥವಾ ಮುಂದಿನ ಫೆಬ್ರುವರಿ ತಿಂಗಳ ಮೂರನೇ ವಾರದೊಳಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಿರ್ಮಿಸಿ ಅನಾವರಣ ಮಾಡುವ ಕುರಿತು ಸರ್ವಸಮ್ಮತ ತೀರ್ಮಾನ ಕೈಗೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನಿರ್ಣಯದಂತೆ ಎಲ್ಲ ಸದಸ್ಯರನ್ನೊಳಗೊಂಡು, ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಿ ಅದ್ದೂರಿಯಾಗಿ ನಡೆಸುವ ಕುರಿತು ಚರ್ಚೆ ನಡೆಯಿತು.

ಕಾರ್ಯಕ್ರಮದ ಯಶಸ್ವಿಗಾಗಿ ವಿಶೇಷವಾಗಿ ಕುಂಭಮೆರವಣಿಗೆ, ಊಟದ ವ್ಯವಸ್ಥೆ, ಕುಡಿಯುವ ನೀರು ಹಾಗೂ ಸ್ವಚ್ಛತಾ ನಿರ್ವಹಣೆ, ವೇದಿಕೆ ನಿರ್ಮಾಣ, ಧ್ವನಿವರ್ಧಕ ವ್ಯವಸ್ಥೆ, ಅತಿಥಿಗಳ ಸ್ವಾಗತ ಹಾಗೂ ಖರ್ಚು–ವೆಚ್ಚಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ಪುತ್ಥಳಿ ಅನಾವರಣ ಕಾರ್ಯಕ್ರಮವು ಶಿಸ್ತುಬದ್ಧವಾಗಿ ಹಾಗೂ ಎಲ್ಲ ಸಮುದಾಯಗಳ ಸೌಹಾರ್ದತೆಯೊಂದಿಗೆ ನಡೆಯಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಗ್ರಾಮ ಪಂಚಾಯಿತಿ ಆವರಣದಲ್ಲಿ ಡಾ. ಅಂಬೇಡ್ಕರ ಪುತ್ಥಳಿ ನಿರ್ಮಾಣದ ಕುರಿತು ಒಮ್ಮತದಿಂದ ಠರಾವು ಪಾಸು ಮಾಡಲು ಗಟ್ಟಿ ನಿರ್ಧಾರ ಕೈಗೊಂಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರಿಗೆ ದಲಿತ ಸಮುದಾಯದ ಪರವಾಗಿ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಇದು ಡಂಬಳ ಗ್ರಾಮದ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕೇತವಾಗಲಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.

ಸಭೆಯನ್ನು ಸಮುದಾಯದ ಹಿರಿಯರಾದ ಮರಿತಿಮ್ಮಪ್ಪ ಆದಮ್ಮನವರ, ಕೆ.ಎನ್. ದೊಡ್ಡಮನಿ, ಡಿ. ಪ್ರಸಾದ, ಮರಿಯಪ್ಪ ಸಿದ್ದಣ್ಣವರ, ಗವಿಸಿದ್ದಪ್ಪ ಬಿಸನಹಳ್ಳಿ, ವಿರೂಪಾಕ್ಷಪ್ಪ ಯಲಿಗಾರ, ನಾಗಪ್ಪ ತಳವಾರ ಅವರ ನೇತೃತ್ವದಲ್ಲಿ ನಡೆಸಲಾಯಿತು. ಸಭೆಯಲ್ಲಿ ಪುತ್ಥಳಿ ನಿರ್ಮಾಣದ ಜಾಗ, ವಿನ್ಯಾಸ, ಭದ್ರತೆ, ನಿರ್ವಹಣೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಿತು.

ಈ ಸಭೆಯಲ್ಲಿ ದೇವಪ್ಪ ತಳಗೇರಿ, ಗ್ರಾಮ ಪಂಚಾಯಿತಿ ಸದಸ್ಯ ರಾಕೇಶ ಅಡವಿ, ಮಾರುತಿ ಬಿಸನಹಳ್ಳಿ, ಮುಖಂಡ ಹನಮಪ್ಪ ಶಿವಪ್ಪ ಹಾದಿಮನಿ, ಕೃಷ್ಣ ಕಟ್ಟೆಣ್ಣವರ, ಉಪನ್ಯಾಸಕರಾದ ಮಂಜುನಾಥ ಬಿಸನಹಳ್ಳಿ, ಗವಿಸಿದ್ದಪ್ಪ ಹಾದಿಮನಿ, ಲಕ್ಷ್ಮಣ ದೊಡ್ಡಮನಿ, ನಾಗಪ್ಪ ಕೊರವರ, ವಿಜಯಕುಮಾರ ಹಾದಿಮನಿ, ವೆಂಕಟೇಶ ತಳವಾರ, ಆದಿತ್ಯ ಗದಗಿನ, ಅಶೋಕ ತಳಗೇರಿ, ದೇವಿಂದ್ರಪ್ಪ ಪೂಜಾರ, ವಿನಾಯಕ ಕಟ್ಟೆಣ್ಣವರ, ಕುಮಾರ ಗೌಡಣ್ಣವರ, ಸುರೇಶ ದೊಡ್ಡಮನಿ, ಹನಮಪ್ಪ ಕೊರವರ, ಷಣ್ಮುಖಪ್ಪ ಒಂಟೆಲಭೋವಿ, ಯಮನಪ್ಪ ಹಾನಿ, ಗೋಪಾಲ ಕದಡಿ, ಲೆಂಕೆಪ್ಪ ಫಕ್ಕಿರಪ್ಪ ಕದಡಿ, ಚೇತನ ಸಿದ್ದಣ್ಣವರ, ಶಂಖರಲಿಂಗಪ್ಪ ಪೂಜಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಮಲ್ಲಿಕಾರ್ಜುನ ಗೌಡಣ್ಣವರ ನಿರೂಪಿಸಿ ವಂದಿಸಿದರು. ಡಂಬಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿ ಸ್ಥಾಪನೆಯಿಂದ ಸಮಾನತೆ, ಶಿಕ್ಷಣ, ಸಾಮಾಜಿಕ ನ್ಯಾಯದ ಸಂದೇಶ ಮತ್ತಷ್ಟು ಗಟ್ಟಿಯಾಗಲಿದೆ ಎಂಬ ವಿಶ್ವಾಸವನ್ನು ಸಭೆಯು ವ್ಯಕ್ತಪಡಿಸಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande