
ಕಲಬುರಗಿ, 11 ಜನವರಿ (ಹಿ.ಸ.) :
ಆ್ಯಂಕರ್ : ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಸಮಗ್ರ ತರಬೇತಿ ನೀಡಬೇಕೆಂಬ ಕನಸು ಇಂದು ನನಸಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ನಗರದ ಹೊರವಲಯದ ವಾಜಪೇಯಿ ಬಡಾವಣೆಯಲ್ಲಿ ಸುಮಾರು 10,000 ಚದುರ ಅಡಿ ವಿಸ್ತೀರ್ಣದಲ್ಲಿ ₹30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಪ್ರಬುದ್ಧ ಪರೀಕ್ಷಾ ಪೂರ್ವ ತರಬೇತಿ ಅಕಾಡೆಮಿ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಅವಧಿಯಲ್ಲೇ ಈ ಕೇಂದ್ರದ ಯೋಜನೆ ರೂಪಿಸಲಾಗಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡ ನಂತರ ಬಂದ ಸರ್ಕಾರ ಈ ಯೋಜನೆಯನ್ನು ಮುಂದುವರಿಸಲಿಲ್ಲ. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಮತ್ತು ಭವಿಷ್ಯದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಆದರೂ, ನಂತರದ ಸರ್ಕಾರ ಈ ಕಾಮಗಾರಿಯನ್ನು ಕೈಗೊಳ್ಳಲಿಲ್ಲ. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ಪ್ರಬುದ್ಧ ಅಕಾಡೆಮಿಯನ್ನು ನಿರ್ಮಿಸಿ, ಉದ್ಘಾಟನೆ ಮಾಡುತ್ತಿದ್ದೇವೆ. ಇದು ನಮ್ಮ ಸರ್ಕಾರದ ಬದ್ಧತೆಯ ಪ್ರತೀಕ. ನಾವು ನುಡಿದಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಖರ್ಗೆ ಹೇಳಿದರು.
ಅಕಾಡೆಮಿ ಕೇವಲ ಕಟ್ಟಡವಲ್ಲ ಇದರೊಳಗೆ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಕನಸುಗಳು ಅಡಗಿವೆ. ಈ ಹಿಂದೆ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಾಗ ಅನೇಕ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ತರಬೇತಿ ಪಡೆಯಲು ಬೆಂಗಳೂರಿಗೆ ತೆರಳಿದ ವಿದ್ಯಾರ್ಥಿಗಳು ಒಂದೇ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಿಸಬೇಕಾಯಿತು. ‘ಮೂರು ನಾಲ್ಕು ಅನ್ನ ಹಾಕು’ ಎಂಬ ವಾಟ್ಸಪ್ ಗುಂಪು ರಚಿಸಿ, ಎಲ್ಲೆಲ್ಲಿ ಉಚಿತ ಊಟ ಸಿಗುತ್ತದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ದೃಶ್ಯ ನನ್ನ ಕಣ್ಣಮುಂದೆ ಬಂದು ಕಣ್ಣೀರು ತರಿಸುತ್ತಿತ್ತು. ಅಂತಹ ಪರಿಸ್ಥಿತಿ ಮತ್ತೆ ನಮ್ಮ ಭಾಗದ ಮಕ್ಕಳಿಗೆ ಬಾರದಿರಲಿ ಎಂಬ ಉದ್ದೇಶದಿಂದಲೇ ಈ ಅಕಾಡೆಮಿ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಪ್ರಬುದ್ಧ ಅಕಾಡೆಮಿ ಉತ್ಕೃಷ್ಟ ತರಬೇತಿ ಕೇಂದ್ರವಾಗಿ ರೂಪುಗೊಳ್ಳಬೇಕು. ಈ ಭಾಗದ ಐಎಎಸ್ ಅಧಿಕಾರಿಗಳು ಅಭ್ಯರ್ಥಿಗಳಿಗೆ ಪಾಠ ಮಾಡಲು ಮುಂದಾಗಬೇಕು. ಅದಕ್ಕಾಗಿ ರೋಸ್ಟರ್ ಪದ್ಧತಿ ರೂಪಿಸಿ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
ಅಕಾಡೆಮಿಗೆ ವಿದ್ಯಾರ್ಥಿಗಳು ಸುಲಭವಾಗಿ ಆಗಮಿಸಲು ಕೆಕೆಆರ್‌ಟಿಸಿ ವತಿಯಿಂದ ಎರಡು ನಗರ ಸಾರಿಗೆ ಸೇವೆಗಳನ್ನು ಇಂದಿನಿಂದಲೇ ಆರಂಭಿಸಲಾಗಿದೆ. ಜೊತೆಗೆ ನಿವೃತ್ತ ಪ್ರಾಧ್ಯಾಪಕರು ಉಚಿತವಾಗಿ ತರಬೇತಿ ನೀಡಲು ಮುಂದಾಗಿದ್ದಾರೆ. ಈಗಾಗಲೇ ಕೆಇಎ ಮೂಲಕ ಸುಮಾರು 10,000 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದು, ಮೆರಿಟ್ ಆಧಾರದ ಮೇಲೆ 500 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗುವುದು. ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಶುಭಾಶಯಗಳನ್ನು ಕೋರಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa