
ಗದಗ, 11 ಜನವರಿ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹೂವಿನಶಿಗ್ಲಿ ಗ್ರಾಮದ ಐತಿಹಾಸಿಕ ಮಠದಲ್ಲಿ ಜ. 13ರಿಂದ 15ರವರೆಗೆ ನಡೆಯಲಿರುವ ಖಡಕ್–ರೊಟ್ಟಿ, ಕರಿಂಡಿ ಜಾತ್ರಾ ಮಹೋತ್ಸವದ ಹಿನ್ನೆಲೆ ಶನಿವಾರ ಶ್ರೀಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಗ್ರಾಮದೆಲ್ಲೆಡೆ ಭಕ್ತಿಭಾವದ ವಾತಾವರಣ ಉಂಟಾಯಿತು.
ಜಾತ್ರಾ ಮಹೋತ್ಸವದ ಪೂರ್ವಸಿದ್ಧತೆಯ ಅಂಗವಾಗಿ ಎತ್ತಿನ ಬಂಡಿಗಳ ಮೂಲಕ ರೊಟ್ಟಿ, ಕಡಬು ಸೇರಿದಂತೆ ದವಸ–ಧಾನ್ಯ ಸಂಗ್ರಹಿಸುವ ಸಂಪ್ರದಾಯಬದ್ಧ ಕಾರ್ಯಕ್ರಮವು ಅತ್ಯಂತ ಶೃದ್ಧಾ–ಭಕ್ತಿಯಿಂದ ನೆರವೇರಿತು.
ಶ್ರೀ ಚನ್ನವೀರ ಮಹಾಸ್ವಾಮಿಗಳು, ಕುಂದಗೋಳದ 65 ಬಸವಣ್ಣಜ್ಜನವರು ಹಾಗೂ ಜಮಖಂಡಿಯ ಗದಿಗೆಯ್ಯ ದೇವರ ನೇತೃತ್ವದಲ್ಲಿ ಅಲಂಕೃತ ಎತ್ತಿನ ಬಂಡಿಗಳೊಂದಿಗೆ ವಾದ್ಯಮೇಳ, ಭಜನೆ, ಡೊಳ್ಳುಗಳ ಸಾಥ್‌ನಲ್ಲಿ ಗ್ರಾಮದಲ್ಲಿ ಸಂಚರಿಸಿ ಭಕ್ತರಿಂದಲೇ ನೇರವಾಗಿ ಪ್ರಸಾದ ಸಾಮಗ್ರಿಗಳನ್ನು ಸಂಗ್ರಹಿಸಲಾಯಿತು.
ಕಳೆದ 46 ವರ್ಷಗಳಿಂದ ನಡೆದು ಬಂದಿರುವ ಈ ಪವಿತ್ರ ಸಂಪ್ರದಾಯವು ಗ್ರಾಮಸ್ಥರ ಮನಸ್ಸುಗಳಲ್ಲಿ ಆಳವಾದ ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಏಕತೆಯನ್ನು ಬಿತ್ತಿದೆ.
ಮಕರ ಸಂಕ್ರಾಂತಿಯ ಪುಣ್ಯಕಾಲದಲ್ಲಿ ಜರುಗುವ ಹೂವಿನಶಿಗ್ಲಿ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ನಡೆಯುವ ಖಡಕ್–ರೊಟ್ಟಿ, ಕರಿಂಡಿ, ಕಡಬು ಪ್ರಸಾದ ಮಾಡುವ ಸಂಪ್ರದಾಯವನ್ನು ಶ್ರೀಮಠದ ಲಿಂಗೈಕ್ಯ ನಿರಂಜನ ಮಹಾಸ್ವಾಮಿಗಳು ಪ್ರಾರಂಭಿಸಿದ್ದಾಗಿ ಶ್ರೀ ಚನ್ನವೀರ ಮಹಾಸ್ವಾಮಿಗಳು ಸ್ಮರಿಸಿದರು. ಐದು ದಶಕಗಳಿಂದ ಭಕ್ತರು ಸ್ವಯಂ ಪ್ರೇರಣೆಯಿಂದ ಮಠಕ್ಕೆ ರೊಟ್ಟಿ ಹಾಗೂ ಧಾನ್ಯಗಳನ್ನು ತಂದು ಸಲ್ಲಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಶ್ರೀಗಳೇ ಭಕ್ತರ ಮನೆಬಾಗಿಲಿಗೆ ತೆರಳಿ ಎತ್ತಿನ ಬಂಡಿಗಳ ಮೂಲಕ ರೊಟ್ಟಿ ಸಂಗ್ರಹಿಸುವ ಹೊಸ ಸಂಪ್ರದಾಯಕ್ಕೆ ಚಾಲನೆ ನೀಡಿದ್ದು, ಭಕ್ತರೊಂದಿಗೆ ಮಠದ ನಂಟು ಮತ್ತಷ್ಟು ಗಟ್ಟಿಯಾಗಲು ಕಾರಣವಾಗಿದೆ ಎಂದು ತಿಳಿಸಿದರು.
ಶ್ರೀಗಳು ಗ್ರಾಮಕ್ಕೆ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ವತಿಯಿಂದ ಊರೆಲ್ಲ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಪ್ರತಿ ಓಣಿಯಲ್ಲೂ ಮನೆಗಳ ಮುಂದೆ ತಳಿರು–ತೋರಣ ಕಟ್ಟಲಾಗಿದ್ದು, ರಂಗೋಲಿಗಳಿಂದ ಊರು ಕಂಗೊಳಿಸಿತು. ಜಾತ್ರೆಯ ಪ್ರಸಾದ ಸೇವೆಗಾಗಿ ಪ್ರತಿ ಮನೆಯಲ್ಲೂ ಮೊದಲೇ ಸಿದ್ಧಪಡಿಸಿದ ನೂರಾರು ರೊಟ್ಟಿಗಳನ್ನು ಎಣ್ಣೆಬುಟ್ಟಿಯಲ್ಲಿ ಹೊಸ ಬಟ್ಟೆ ಕಟ್ಟಿಕೊಂಡು ಪೂಜೆ ಸಲ್ಲಿಸಿ ತಲೆಯ ಮೇಲೆ ಹೊತ್ತು ಕಾಯುತ್ತಿದ್ದ ದೃಶ್ಯಗಳು ಭಕ್ತಿಭಾವಕ್ಕೆ ಸಾಕ್ಷಿಯಾದವು. ತಾಯಂದಿರ ತಲೆಯ ಮೇಲಿನ ಬುಟ್ಟಿಯನ್ನು ಶ್ರೀಗಳು ಮುಟ್ಟಿ ಆಶೀರ್ವದಿಸಿದ ಬಳಿಕ ಸಾಲುಗಟ್ಟಿ ನಿಂತಿದ್ದ ಎತ್ತಿನ ಚಕ್ಕಡಿಗಳಲ್ಲಿ ರೊಟ್ಟಿಗಳನ್ನು ಸಂಗ್ರಹಿಸಲಾಯಿತು. ಅಲ್ಲದೆ ನೂರಾರು ಮಹಿಳೆಯರು ರೊಟ್ಟಿ ಬುಟ್ಟಿ ಹೊತ್ತು ಮೆರವಣಿಗೆಯ ಮೂಲಕ ಮಠದವರೆಗೆ ತಲುಪಿಸಿ ಅಪಾರ ಸಂತೃಪ್ತಿ ವ್ಯಕ್ತಪಡಿಸಿದರು.
ಅಲಂಕೃತ ಎತ್ತಿನ ಬಂಡಿಗಳು, ಭಜನೆ–ಡೊಳ್ಳು ವಾದ್ಯಮೇಳದೊಂದಿಗೆ ನಡೆದ ಮೆರವಣಿಗೆಯಲ್ಲಿ ಎಲ್ಲ ಜಾತಿ–ಜನಾಂಗದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಶ್ರೀಮಠದ ಭಕ್ತ ಮಂಡಳಿಯ ಅಂದಾನಯ್ಯ ಹಿರೇಮಠ, ನೀಲಪ್ಪ ಹೊಸೂರ, ಆರ್.ಎಸ್. ಪಾಟೀಲ, ಮಾದೇವಪ್ಪ ಬಿಷ್ಟಣ್ಣವರ, ನಿಂಗಪ್ಪ ಕಳ್ಳಿಮನಿ, ಪಿ.ಎಚ್. ಪಾಟೀಲ, ಶಿವಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಭಕ್ತ ಗಿರಿಜವ್ವ ಶ್ಯಾಮಸುಂದರ ಮಾತನಾಡಿ, “ಲಿಂಗೈಕ್ಯ ನಿರಂಜನ ಸ್ವಾಮಿಗಳು ಹಾಗೂ ಇಂದಿನ ಚನ್ನವೀರ ಮಹಾಸ್ವಾಮಿಗಳ ಕಾರಣದಿಂದ ಹೂವಿನಶಿಗ್ಲಿ ಎಂಬ ಚಿಕ್ಕ ಗ್ರಾಮ ನಾಡಿನೆಲ್ಲೆಡೆ ಹೆಸರಾಗಿದೆ. ಗುರುಕುಲದ ಮಕ್ಕಳ ಶಿಕ್ಷಣ, ಜಾತ್ರಾ ಮಹೋತ್ಸವದ ಅನ್ನದಾನಕ್ಕಾಗಿ ಅಳಿಲು ಸೇವೆ ಮಾಡುವ ಅವಕಾಶ ನಮಗೆ ದೊರೆತಿರುವುದು ನಮ್ಮ ಭಾಗ್ಯ. ಶ್ರೀಮಠವು ಮೇಲು–ಕೀಳು, ಬಡವ–ಶ್ರೀಮಂತ ಭೇದಭಾವಗಳನ್ನು ತೊಡೆದು ಹಾಕಿ ಸೌಹಾರ್ದತೆ ಹಾಗೂ ಸಹೋದರತೆಯ ಬದುಕಿಗೆ ಪ್ರೇರಣೆ ನೀಡಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಾತ್ರೆಯ ಮೂರು ದಿನಗಳ ಕಾಲ ನಾಡಿನ ಅನೇಕ ಹರ–ಗುರು–ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹ ಮಹೋತ್ಸವ ಸೇರಿದಂತೆ ಹಲವಾರು ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತರ ಸೇವೆ–ಸಹಕಾರ ಸ್ಮರಣೀಯವಾಗಲಿದೆ ಎಂದು ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಈ ವೇಳೆ ಸ್ವಾಮೀಜಿಗಳು ಹಾಗೂ ಭಕ್ತರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP