
ಭುವನೇಶ್ವರ, 10 ಜನವರಿ (ಹಿ.ಸ.) :
ಆ್ಯಂಕರ್ : ಏಳು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡಿಯಾ ವನ್ ಏರ್ ಸಂಸ್ಥೆಯ 9 ಸೀಟರ್ ಚಾರ್ಟರ್ ವಿಮಾನವೊಂದು ಶನಿವಾರ ಒಡಿಶಾದ ರೂರ್ಕೆಲಾ ಸಮೀಪದ ಜಗದಾ ಬ್ಲಾಕ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರೂರ್ಕೆಲಾ–ಭುವನೇಶ್ವರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈ ವಿಮಾನವು ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಎದುರಿಸಿದೆ. ಪರಿಣಾಮ ಪೈಲಟ್ ವಿಮಾನವನ್ನು ರೌರ್ಕೆಲಾ ವಿಮಾನ ನಿಲ್ದಾಣದಿಂದ ಸುಮಾರು 9–10 ಕಿಲೋಮೀಟರ್ ದೂರದ ಜಗದಾ/ಜಲ್ಲಾ ಪ್ರದೇಶದ ಹುಲ್ಲುಗಾವಲಿನಲ್ಲಿ ತುರ್ತು ಭೂ ಸ್ಪರ್ಷ ಮಾಡುವಲ್ಲಿ ಯಶಸ್ವಿಯಾದರು.
ವಿಮಾನದಲ್ಲಿ ಪೈಲಟ್ ಸೇರಿದಂತೆ ಒಟ್ಟು ಏಳು ಮಂದಿ ಇದ್ದು, ಆರು ಪ್ರಯಾಣಿಕರಿಗೆ ಸಣ್ಣ ಗಾಯಗಳಾಗಿವೆ. ಪೈಲಟ್‌ಗೆ ಮಾತ್ರ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯನ್ನು ದೃಢಪಡಿಸಿರುವ ಒಡಿಶಾ ವಾಣಿಜ್ಯ ಮತ್ತು ಸಾರಿಗೆ ಸಚಿವ ಬಿ.ಬಿ. ಜೆನಾ ಅವರು, “ಆರು ಮಂದಿಗೆ ಸಣ್ಣ ಗಾಯಗಳಾಗಿವೆ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯ ಮಾಹಿತಿ ಪಡೆದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿವೆ. ಸ್ಥಳೀಯ ಆಡಳಿತವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಅಪಘಾತಕ್ಕೆ ಕಾರಣವಾದ ತಾಂತ್ರಿಕ ದೋಷದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರವೇ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa