
ನವದೆಹಲಿ, 10 ಜನವರಿ (ಹಿ.ಸ.) :
ಆ್ಯಂಕರ್ : ಭಾರತವು ಇಂದು ವಿಶ್ವದ ಮೂರನೇ ಅತಿದೊಡ್ಡ ಪ್ರಕಾಶನ ಉದ್ಯಮ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ಡಿಜಿಟಲ್ ಯುಗದಲ್ಲಿಯೂ ಪುಸ್ತಕಗಳು ಮಾನವೀಯತೆಯ ಶ್ರೇಷ್ಠ ಸ್ನೇಹಿತಗಳಾಗಿದ್ದು, ನವದೆಹಲಿ ವಿಶ್ವ ಪುಸ್ತಕ ಮೇಳವು ಜ್ಞಾನ, ವಿಚಾರ ಹಾಗೂ ಸಂಸ್ಕೃತಿಯ ಮಹತ್ವದ ಕೇಂದ್ರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಭಾರತ್ ಮಂಟಪದಲ್ಲಿ ಜನವರಿ 10ರಿಂದ 18ರವರೆಗೆ ನಡೆಯಲಿರುವ 53ನೇ ನವದೆಹಲಿ ವಿಶ್ವ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಈ ಬಾರಿ ಮೇಳದಲ್ಲಿ 35ಕ್ಕೂ ಹೆಚ್ಚು ದೇಶಗಳಿಂದ 1,000ಕ್ಕೂ ಅಧಿಕ ಪ್ರಕಾಶಕರು ಭಾಗವಹಿಸುತ್ತಿದ್ದು, 3,000ಕ್ಕೂ ಹೆಚ್ಚು ಮಳಿಗೆಗಳು ಸ್ಥಾಪನೆಯಾಗಿವೆ ಎಂದರು. ಜೊತೆಗೆ 600ಕ್ಕೂ ಹೆಚ್ಚು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳದ ಅವಧಿಯಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಈ ಬಾರಿ ಮೊದಲ ಬಾರಿಗೆ ವಿಶ್ವ ಪುಸ್ತಕ ಮೇಳಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಲಕ್ಷಾಂತರ ಓದುಗರು, ವಿದ್ಯಾರ್ಥಿಗಳು ಹಾಗೂ ಕುಟುಂಬಗಳು ಯಾವುದೇ ಶುಲ್ಕವಿಲ್ಲದೆ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಈ ವರ್ಷದ ಮೇಳದ ವಿಷಯವನ್ನು “ಭಾರತೀಯ ಸೈನಿಕ ಇತಿಹಾಸ – ಶೌರ್ಯ ಮತ್ತು ಬುದ್ಧಿವಂತಿಕೆ @ 75” ಎಂದು ಘೋಷಿಸಿದ ಅವರು, ಕಳೆದ 75 ವರ್ಷಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೋರಿದ ಧೈರ್ಯ, ತ್ಯಾಗ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಈ ವಿಷಯ ಸ್ಮರಿಸುತ್ತದೆ ಎಂದು ಹೇಳಿದರು.
ಥೀಮ್ ಪೆವಿಲಿಯನ್‌ನಲ್ಲಿ ಸೈನಿಕ ಇತಿಹಾಸದ ಕುರಿತು 500ಕ್ಕೂ ಹೆಚ್ಚು ಪುಸ್ತಕಗಳು, ಮಾದರಿ ಪ್ರದರ್ಶನಗಳು, 1971ರ ಯುದ್ಧ ಮತ್ತು ಕಾರ್ಗಿಲ್ ಸಂಘರ್ಷದ ಕುರಿತು ಚರ್ಚೆಗಳು, ಜೊತೆಗೆ ಯುದ್ಧ ವೀರರೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ಭಗವದ್ಗೀತೆ ಜ್ಞಾನವನ್ನು ಅತ್ಯಂತ ಪವಿತ್ರವೆಂದು ವರ್ಣಿಸುತ್ತದೆ ಎಂದು ಉಲ್ಲೇಖಿಸಿದ ಪ್ರಧಾನ್, ವಿಶ್ವ ಪುಸ್ತಕ ಮೇಳವು ಕೇವಲ ಪುಸ್ತಕಗಳ ಪ್ರದರ್ಶನವಲ್ಲ, ಬದಲಾಗಿ ವಿಚಾರ ವಿನಿಮಯ, ಸಂವಾದ ಮತ್ತು ದೇಶಭಕ್ತಿಯ ಮನೋಭಾವವನ್ನು ಬಲಪಡಿಸುವ ವೇದಿಕೆ ಎಂದು ಹೇಳಿದರು.
ವಿಶ್ವ ಪುಸ್ತಕ ಮೇಳವು ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa