ಇತಿಹಾಸದಿಂದ ಅರಿತು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಿ : ಯುವಕರಿಗೆ ಅಜಿತ್ ದೋವಲ್ ಕರೆ
ನವದೆಹಲಿ, 10 ಜನವರಿ (ಹಿ.ಸ.) : ಆ್ಯಂಕರ್ : ಯುವಜನರು ದೂರದೃಷ್ಟಿಯುಳ್ಳ ಮತ್ತು ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳಬೇಕು. ಯುವಕರ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸವೇ ದೀರ್ಘಾವಧಿಯಲ್ಲಿ ರಾಷ್ಟ್ರದ ನಿಜವಾದ ಶಕ್ತಿ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಯುವಜನ ವ್ಯವಹ
Ajit  doval


ನವದೆಹಲಿ, 10 ಜನವರಿ (ಹಿ.ಸ.) :

ಆ್ಯಂಕರ್ : ಯುವಜನರು ದೂರದೃಷ್ಟಿಯುಳ್ಳ ಮತ್ತು ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳಬೇಕು. ಯುವಕರ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸವೇ ದೀರ್ಘಾವಧಿಯಲ್ಲಿ ರಾಷ್ಟ್ರದ ನಿಜವಾದ ಶಕ್ತಿ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ಯುವಜನ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಯುವ ನಾಯಕರ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕನಿಷ್ಠ ಎರಡು ಹೆಜ್ಜೆ ಮುಂದೆ ಯೋಚಿಸುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪರ್ಯಾಯ ಮಾರ್ಗಗಳನ್ನು ವಿಶ್ಲೇಷಿಸಿ ವಿವೇಕಬುದ್ಧಿಯಿಂದ ಕ್ರಮ ಕೈಗೊಳ್ಳುವ ಮಹತ್ವವನ್ನೂ ಅವರು ಒತ್ತಿ ಹೇಳಿದರು.

ಜಾಗತಿಕ ಸಂಘರ್ಷಗಳ ಸ್ವರೂಪವನ್ನು ವಿವರಿಸಿದ ದೋವಲ್, ಅವು ಕೇವಲ ಆಯುಧಗಳ ನಡುವಿನ ಯುದ್ಧವಲ್ಲ, ಬದಲಾಗಿ ಮನಸ್ಸು ಮತ್ತು ಆಲೋಚನೆಗಳ ನಡುವಿನ ಸಂಘರ್ಷ ಎಂದು ಅಭಿಪ್ರಾಯಪಟ್ಟರು. ನೈತಿಕತೆ ದುರ್ಬಲವಾಗಿದ್ದರೆ ಅತ್ಯಾಧುನಿಕ ಆಯುಧಗಳೂ ಅರ್ಥವಿಲ್ಲದಾಗುತ್ತವೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ನೈತಿಕ ನಾಯಕತ್ವಕ್ಕೆ ಮಹತ್ವ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅವರು ಶ್ಲಾಘಿಸಿದರು.

ಇತಿಹಾಸವನ್ನು ಅಮೂಲ್ಯ ಪಾಠವೆಂದು ಬಣ್ಣಿಸಿದ ದೋವಲ್, ಭವಿಷ್ಯದ ಪೀಳಿಗೆಗಳು ಇತಿಹಾಸದಿಂದ ಕಲಿಯದಿದ್ದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ ಎಂದು ಹೇಳಿದರು. ಹಿಂದೆ ಭಾರತ ತನ್ನ ಭದ್ರತೆ ಹಾಗೂ ಎದುರಾಗಿದ್ದ ಬೆದರಿಕೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಯಿತು. ಇದರ ಪರಿಣಾಮವಾಗಿ ಇತಿಹಾಸವು ನಮಗೆ ಕಠಿಣ ಪಾಠಗಳನ್ನು ಕಲಿಸಿತು ಎಂದು ಅವರು ಹೇಳಿದರು.

ಈಗ ಸಮಯ ಬಂದಿದೆ—ನಮ್ಮ ಇತಿಹಾಸ, ಗುರುತು ಮತ್ತು ನಂಬಿಕೆಯ ಆಧಾರದ ಮೇಲೆ ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ರೂಪಿಸುವ ಎತ್ತರಕ್ಕೆ ದೇಶವನ್ನು ಕೊಂಡೊಯ್ಯಬೇಕು ಎಂದು ಅವರು ಕರೆ ನೀಡಿದರು.

ಯುವಜನರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಷ್ಟೇ ಅಲ್ಲ, ಅವುಗಳನ್ನು ಕಾರ್ಯರೂಪಕ್ಕೆ ತಂದು ಸರಿ ಎಂದು ಸಾಬೀತುಪಡಿಸಬೇಕು ಎಂದು ದೋವಲ್ ಒತ್ತಾಯಿಸಿದರು. ನಿರ್ಧಾರಗಳಲ್ಲಿ ದೃಢತೆಯಿದ್ದಾಗ ಮಾತ್ರ ಬಲವಾದ ನಾಯಕತ್ವ ನಿರ್ಮಾಣವಾಗುತ್ತದೆ. ಸ್ಫೂರ್ತಿ ತಾತ್ಕಾಲಿಕವಾದರೂ, ಅದನ್ನು ಜೀವನಶೈಲಿಯಾಗಿ ಅಳವಡಿಸಿಕೊಂಡಾಗ ಅದು ಶಿಸ್ತಾಗಿ, ನಂತರ ಅಭ್ಯಾಸವಾಗಿ ರೂಪುಗೊಳ್ಳುತ್ತದೆ ಎಂದು ಅವರು ಹೇಳಿದರು.

ವಿಳಂಬ ಪ್ರವೃತ್ತಿಯನ್ನು ತ್ಯಜಿಸಿ ಶ್ರದ್ಧೆಯಿಂದ ಮತ್ತು ನಿಷ್ಠೆಯಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ತಿಳಿಸಿದ ಅವರು, ಯುವಕರ ಮನೋಬಲ ಬಲವಾದಾಗಲೇ ರಾಷ್ಟ್ರದ ಮನೋಬಲವೂ ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande