
ಗದಗ, 01 ಜನವರಿ (ಹಿ.ಸ.) :
ಆ್ಯಂಕರ್ : ಬೆಟಗೇರಿ ಸವಿತಾ ಸಮಾಜದಲ್ಲಿ ಕೆಲ ದುಷ್ಟ ಶಕ್ತಿಗಳು ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪುರ ಅವರ ಮೇಲೆ ದೌರ್ಜನ್ಯ ಹಾಗೂ ಬೆದರಿಕೆ ನಡೆಸುತ್ತಿರುವುದು ಖಂಡನೀಯ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣ ಎಚ್. ಹಡಪದ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಾಜದ ಏಕತೆ ಮತ್ತು ಸಹಕಾರವನ್ನು ಭಂಗಪಡಿಸುವ ಉದ್ದೇಶದಿಂದ ಕೆಲವರು ಹಿರಿಯರನ್ನು ಬೆದರಿಸಿ, ಸಮಾಜದಿಂದ ಹೊರಗಿಡುವ ಬೆದರಿಕೆ ಹಾಕುತ್ತಿದ್ದಾರೆ. ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಹನುಮಂತಪ್ಪ ರಾಂಪುರ ಅವರನ್ನು ಸಭೆ–ಸಮಾರಂಭಗಳಿಂದ ದೂರ ಇಡುವ ಪ್ರಯತ್ನ ನಡೆಯುತ್ತಿದೆ. ಇದು ಸಮಾಜದ ಹಿರಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಬೆದರಿಕೆಯ ಭಾಗವಾಗಿದ್ದು, ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ ಎಂದು ಹೇಳಿದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೂ ಬೆಟಗೇರಿ ಸವಿತಾ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಇಂತಹ ದುಷ್ಟ ಶಕ್ತಿಗಳಿಗೆ ಬಹಿರಂಗ ಬೆಂಬಲ ನೀಡಲಾಗುತ್ತಿದೆಯೇ ಎಂಬ ಅನುಮಾನವೂ ಮೂಡುತ್ತಿದೆ ಎಂದು ಕೃಷ್ಣ ಹಡಪದ ಆಕ್ರೋಶ ವ್ಯಕ್ತಪಡಿಸಿದರು.
ದುಷ್ಟ ಶಕ್ತಿಗಳು ಹಾಗೂ ಅವರಿಗೆ ಬೆಂಬಲಿಸುವವರು ತಮ್ಮ ಕೃತ್ಯಗಳನ್ನು ತಕ್ಷಣ ನಿಲ್ಲಿಸಿ, ಸಮಾಜದ ಹಿರಿಯರು ಮತ್ತು ಸದಸ್ಯರಿಗೆ ಗೌರವ ನೀಡಬೇಕು, ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲು ಗದಗ ಜಿಲ್ಲಾ ಸವಿತಾ ಸಮಾಜ ಹಿಂಜರಿಯುವುದಿಲ್ಲ. ಈ ಸಂಬಂಧ ಕಾನೂನು ಸಚಿವ ಎಚ್.ಕೆ. ಪಾಟೀಲ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಾಜದ ಹಿರಿಯರು ಮತ್ತು ಸದಸ್ಯರ ಸುರಕ್ಷತೆ ಹಾಗೂ ಗೌರವವನ್ನು ಕಾಪಾಡುವುದು ನಮ್ಮ ಕರ್ತವ್ಯ. ಅಗತ್ಯವಿದ್ದರೆ ಮುಲಾಜಿಲ್ಲದೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣ ಎಚ್. ಹಡಪದ ಅವರು ನೇರ ಹಾಗೂ ಕೊನೆಯ ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / lalita MP