
ನವದೆಹಲಿ, 01 ಜನವರಿ (ಹಿ.ಸ.) :
ಆ್ಯಂಕರ್ : ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಪಾಕಿಸ್ತಾನದ ವಾಯುನೆಲೆಯ ಮೇಲೆ ಬಾಂಬ್ ದಾಳಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರನ್ನು ಭಾರತೀಯ ವಾಯುಪಡೆಯ ಹೊಸ ಉಪ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ಈ ಮೂಲಕ ಅವರು ವಾಯುಪಡೆಯ 50ನೇ ಉಪ ಮುಖ್ಯಸ್ಥರಾಗಿದ್ದಾರೆ. ಇದುವರೆಗೆ ನೈಋತ್ಯ ವಾಯು ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದ ಅವರು, ಗುರುವಾರ ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ ಅವರಿಂದ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಪದಗ್ರಹಣಕ್ಕೂ ಮುನ್ನ ಏರ್ ಮಾರ್ಷಲ್ ಕಪೂರ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕರಿಗೆ ಗೌರವ ಸಲ್ಲಿಸಿದರು. ನಂತರ ಅವರಿಗೆ ಗೌರವ ರಕ್ಷೆ ನೀಡಲಾಯಿತು.
ಕಳೆದ ವರ್ಷ ಮೇ 6ರಿಂದ 10ರವರೆಗೆ ನಡೆದ ಆಪರೇಷನ್ ಸಿಂಧೂರ್ ವೇಳೆ, ಸೌತ್ ವೆಸ್ಟರ್ನ್ ಏರ್ ಕಮಾಂಡ್‌ನ ಕಮಾಂಡರ್ ಆಗಿದ್ದ ಏರ್ ಮಾರ್ಷಲ್ ನಾಗೇಶ್ ಕಪೂರ್ ನೇತೃತ್ವದಲ್ಲಿ ಭಾರತೀಯ ವಾಯುಪಡೆಯು ಪಾಕಿಸ್ತಾನದ ಹಲವು ವಾಯುನೆಲೆಗಳ ಮೇಲೆ ಪರಿಣಾಮಕಾರಿ ದಾಳಿಗಳನ್ನು ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ವಾಯುಪಡೆಯಿಗೆ ಭಾರೀ ನಷ್ಟ ಉಂಟಾಗಿತ್ತು.
ಡಿಸೆಂಬರ್ 6, 1986ರಂದು ಫೈಟರ್ ಸ್ಟ್ರೀಮ್‌ಗೆ ನಿಯೋಜಿತರಾದ ಏರ್ ಮಾರ್ಷಲ್ ಕಪೂರ್, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ), ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜು ಹಾಗೂ ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಹಳೆಯ ವಿದ್ಯಾರ್ಥಿ. ಅರ್ಹ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ ಮತ್ತು ಫೈಟರ್ ಕಾಂಬಾಟ್ ಲೀಡರ್ ಆಗಿರುವ ಅವರು, ಮೂರು ದಶಕಗಳಿಗಿಂತಲೂ ಹೆಚ್ಚು ಸೇವಾ ಅವಧಿಯಲ್ಲಿ 3,400 ಗಂಟೆಗಳಿಗಿಂತ ಹೆಚ್ಚು ಫ್ಲೈಯಿಂಗ್ ಅನುಭವ ಹೊಂದಿದ್ದಾರೆ. MiG-21 ಮತ್ತು MiG-29 ಸೇರಿದಂತೆ ವಿವಿಧ ಯುದ್ಧ ಹಾಗೂ ತರಬೇತಿ ವಿಮಾನಗಳನ್ನು ಅವರು ಯಶಸ್ವಿಯಾಗಿ ಹಾರಿಸಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ ಅವರು ಫೈಟರ್ ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್, ಫ್ಲೈಯಿಂಗ್ ಬೇಸ್‌ನ ಸ್ಟೇಷನ್ ಕಮಾಂಡರ್, ಪ್ರಮುಖ ವಾಯುನೆಲೆಯ ಏರ್ ಆಫೀಸರ್ ಕಮಾಂಡಿಂಗ್ ಸೇರಿದಂತೆ ಅನೇಕ ಕಾರ್ಯಾಚರಣಾತ್ಮಕ ಮತ್ತು ಬೋಧನಾ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ವಾಯುಪಡೆ ಅಕಾಡೆಮಿಯಲ್ಲಿ ಮುಖ್ಯ ಬೋಧಕರಾಗಿ (ಫ್ಲೈಯಿಂಗ್) ಹಾಗೂ ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನಲ್ಲಿ ಡೈರೆಕ್ಟಿಂಗ್ ಸ್ಟಾಫ್ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಸೌತ್ ವೆಸ್ಟರ್ನ್ ಏರ್ ಕಮಾಂಡ್‌ಗೆ ಮೊದಲು, ಅವರು ತರಬೇತಿ ಕಮಾಂಡ್‌ನಲ್ಲಿ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಸೆಂಟ್ರಲ್ ಏರ್ ಕಮಾಂಡ್‌ನಲ್ಲಿ ಹಿರಿಯ ಏರ್ ಸ್ಟಾಫ್ ಆಫೀಸರ್ ಮತ್ತು ಏರ್ ಆಫೀಸರ್-ಇನ್-ಚಾರ್ಜ್ ಸಿಬ್ಬಂದಿ ಹುದ್ದೆಗಳನ್ನೂ ವಹಿಸಿಕೊಂಡಿದ್ದರು. ಮೇ 1, 2024ರಂದು ಅವರು ತರಬೇತಿ ಕಮಾಂಡ್‌ನ ಎಒಸಿ-ಇನ್-ಚೀಫ್ ಹುದ್ದೆ ಸ್ವೀಕರಿಸಿದ್ದರು.
ಅವರ ವಿಶಿಷ್ಟ ಸೇವೆ ಮತ್ತು ಕಾರ್ಯಾಚರಣಾತ್ಮಕ ನಾಯಕತ್ವಕ್ಕಾಗಿ ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರಿಗೆ ಹಲವು ಗೌರವಗಳು ಲಭಿಸಿವೆ. 2008ರಲ್ಲಿ ವಾಯು ಸೇನಾ ಪದಕ, 2022ರಲ್ಲಿ ಅತಿ ವಿಶಿಷ್ಟ ಸೇವಾ ಪದಕ, 2025ರ ಗಣರಾಜ್ಯೋತ್ಸವದಂದು ಪರಮ ವಿಶಿಷ್ಟ ಸೇವಾ ಪದಕ ಹಾಗೂ 2025ರ ಸ್ವಾತಂತ್ರ್ಯ ದಿನದಂದು ಆಪರೇಷನ್ ಸಿಂಧೂರ್ ವೇಳೆ ಅವರ ಪಾತ್ರಕ್ಕಾಗಿ ಸರ್ವೋತ್ತಮ ಯುದ್ಧ ಸೇವಾ ಪದಕವನ್ನು ಅವರಿಗೆ ಪ್ರದಾನಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa