ಬೆಂಗಳೂರು, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತವು ಈಗ ವಿಶ್ವದ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಕೈಗಾರಿಕಾ ಸುಧಾರಣೆಗಳು ಮತ್ತು ದೃಢ ನಿರ್ಧಾರಗಳು ಇನ್ನಷ್ಟು ಬಲನೀಡಿ ದೇಶದ ಉತ್ಪಾದನಾ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿವೆ.
2023–24ರಲ್ಲಿ ಉತ್ಪಾದನಾ ವಲಯ 11.89% ಮೌಲ್ಯವರ್ಧಿತ ಉತ್ಪಾದನೆ (GVA) ಸಾಧಿಸಿದ್ದು, ಹಿಂದಿನ ಸಾಲಿನ 7.3% ಹೋಲಿಕೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಕೈಗಾರಿಕಾ ಉತ್ಪಾದನೆ ಏಪ್ರಿಲ್ 2023–ಮಾರ್ಚ್ 2024 ಅವಧಿಯಲ್ಲಿ 5.80% ಹೆಚ್ಚಳ ಕಂಡಿದೆ.
ಉದ್ಯೋಗ ವಲಯದಲ್ಲೂ ಭರ್ಜರಿ ಬೆಳವಣಿಗೆ
ಉದ್ಯೋಗ ಸೃಷ್ಟಿಯಲ್ಲಿಯೂ ಉತ್ಪಾದನಾ ವಲಯವು ಮಹತ್ವದ ಪ್ರಗತಿ ದಾಖಲಿಸಿದೆ. FY24ರಲ್ಲಿ ಉದ್ಯೋಗ 5.92% ಏರಿಕೆಯಾಗಿ, ಕಳೆದ ದಶಕದಲ್ಲಿ 57 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದು, ಇಂದು 1.95 ಕೋಟಿ ಕಾರ್ಮಿಕರು ಕಾರ್ಖಾನೆ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.
ಉದ್ಯೋಗ ವೃದ್ಧಿಗೆ ಭಾರತ ಸರ್ಕಾರದ ಕೈಗಾರಿಕಾ ನೀತಿಗಳು ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಮೇಕ್ ಇನ್ ಇಂಡಿಯಾ”, “ಆತ್ಮನಿರ್ಭರ ಭಾರತ” ಮತ್ತು ಉತ್ಪಾದನೆ ಆಧಾರಿತ ಪ್ರೋತ್ಸಾಹ (PLI) ಯೋಜನೆಗಳು ಉದ್ಯಮ ವಲಯಕ್ಕೆ ಹೊಸ ಚೈತನ್ಯ ತುಂಬಿವೆ.
ಉತ್ಪಾದನಾ ಬೆಳವಣಿಗೆಯ ಪ್ರಮುಖ ಚಾಲಕರು ಲೋಹೋತ್ಪಾದನೆ, ವಾಹನೋತ್ಪಾದನೆ, ರಸಾಯನ ವಸ್ತುಗಳು, ಆಹಾರ ಉತ್ಪಾದನೆ ಮತ್ತು ಔಷಧೋತ್ಪಾದನೆ. ಈ ವಲಯಗಳಲ್ಲಿ ಹೂಡಿಕೆ ಏರಿಕೆಯಿಂದ GDPಗೂ ಬಲ ಸಿಕ್ಕಿದ್ದು ಹಾಗೂ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಿವೆ.
ರಾಜ್ಯ ಮಟ್ಟದಲ್ಲೂ ಉತ್ಪಾದನಾ ವಲಯ ವೇಗ ಪಡೆದುಕೊಂಡಿದೆ. ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಹೂಡಿಕೆ ಆಕರ್ಷಣೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿ ನಿಂತಿವೆ. ಈ ರಾಜ್ಯಗಳ ಸಾಧನೆಗೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಾರ್ಮಿಕ ಶಕ್ತಿ ಹಾಗೂ ಕೇಂದ್ರ ಸರ್ಕಾರದ ಸಮಗ್ರಾಭಿವೃದ್ಧಿ ದೃಷ್ಟಿಯ ಪ್ರತಿಫಲನವಾಗಿದೆ.
GDPಯಲ್ಲಿ ಉತ್ಪಾದನೆಯ ಪಾಲು:
ಪ್ರಸ್ತುತ ಉತ್ಪಾದನಾ ವಲಯವು ಭಾರತದ GDPಯಲ್ಲಿ 17% ಪಾಲು ನೀಡುತ್ತಿದ್ದು, ಕೋವಿಡ್ ನಂತರದ ಆರ್ಥಿಕ ಪುನರುತ್ಥಾನದಲ್ಲಿ ಉತ್ಪಾದನಾ ವಲಯದ ಕೊಡುಗೆ ಮಹತ್ವದ್ದಾಗಿದೆ. ಕೈಗಾರಿಕಾ ವಿಸ್ತರಣೆ, ಹೂಡಿಕೆ ಪ್ರೋತ್ಸಾಹ, ಸ್ಥಳೀಯ ಉತ್ಪಾದನೆ ಹಾಗೂ ಸರ್ಕಾರದ ನೀತಿಗಳಿಂದ ಆರ್ಥಿಕತೆ ಮತ್ತಷ್ಟು ಬಲಿಷ್ಠವಾಗಿದೆ.
FY24ರ ಸಾಧನೆಗಳು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಿದೆ. ವಿದೇಶಿ ಹೂಡಿಕೆದಾರರು ಭಾರತವನ್ನು ಉತ್ಪಾದನಾ ಕೇಂದ್ರವೆಂದು ಪರಿಗಣಿಸುತ್ತಿದ್ದಾರೆ. ಉತ್ಪಾದನಾ ಸಾಮರ್ಥ್ಯ, ಕಾರ್ಮಿಕ ಶಕ್ತಿ ಹಾಗೂ ಮಾರುಕಟ್ಟೆ ವಿಸ್ತರಣೆ ಭಾರತವನ್ನು ಹೂಡಿಕೆ ಗುರಿಯನ್ನಾಗಿ ಮಾಡಿವೆ.ಇದು ಆರ್ಥಿಕ ಭವಿಷ್ಯಕ್ಕೆ ಭರವಸೆ ನೀಡುತ್ತಿದೆ.
“ಮೇಕ್ ಇನ್ ಇಂಡಿಯಾ” ಅಭಿಯಾನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ. FY24ರ ಸಾಧನೆಗಳು ಈ ಗುರಿಯನ್ನು ಬಲಪಡಿಸುತ್ತಿದ್ದು, 2025 ಮುಗಿಯುವುದರೊಳಗೆ ಉತ್ಪಾದನಾ ವಲಯದಿಂದ GDPಯಲ್ಲಿ 25% ಹಂಚಿಕೆ ತಲುಪಿಸುವ ಗುರಿಯತ್ತ ಭಾರತ ವೇಗವಾಗಿ ಸಾಗುತ್ತಿದೆ.
ಭಾರತ ಸರ್ಕಾರದ ಯೋಜನೆಗಳು, ಉದ್ಯೋಗ ಸೃಷ್ಟಿ, ಆರ್ಥಿಕ ಪುನರುತ್ಥಾನ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯಲ್ಲಿ ಭಾರತ ಸಾಧಿಸಿರುವ ಹೆಜ್ಜೆಗಳು ಇವೆಲ್ಲವೂ ಭಾರತವನ್ನು ಜಾಗತಿಕ ಕೈಗಾರಿಕಾ ಶಕ್ತಿ ಕೇಂದ್ರವನ್ನಾಗಿ ರೂಪಿಸುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa