ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಪ್ರಸ್ತಾವಿತ ಬೃಹತ್ ಮೂಲಸೌಕರ್ಯ ಯೋಜನೆ ಬುಡಕಟ್ಟು ಸಮುದಾಯಗಳ ಹಕ್ಕುಗಳ ಉಲ್ಲಂಘನೆ ಮತ್ತು ಪರಿಸರ ಹಾನಿ ಎಂದು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸೋನಿಯಾ ಗಾಂಧಿಯವರು ಇಂಗ್ಲಿಷ್ ಪತ್ರಿಕೆಯಲ್ಲಿ ಲೇಖನ ಬರೆದು ಈ ಯೋಜನೆಯನ್ನು “ಪರಿಸರೀಯ ದುರಂತ” ಎಂದು ಕರೆದರೆ, ಮಲ್ಲಿಕಾರ್ಜುನ ಖರ್ಗೆ ಇದನ್ನು ವಿನಾಶಕಾರಿ ಯೋಜನೆ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಇದನ್ನು ಸರ್ಕಾರದ ಅಸಂವೇದನಾಶೀಲತೆಯ ಸಂಕೇತವೆಂದು ಹೇಳಿದ್ದಾರೆ.
₹72,000 ಕೋಟಿಯ ವೆಚ್ಚದ ಈ ಯೋಜನೆ ಶೋಂಪೆನ್ ಮತ್ತು ನಿಕೋಬಾರಿ ಬುಡಕಟ್ಟು ಜನಾಂಗದವರ ಅಸ್ತಿತ್ವಕ್ಕೆ ಅಪಾಯ ಉಂಟುಮಾಡುವುದಲ್ಲದೆ, ದ್ವೀಪದ ಮಳೆಕಾಡಿನ 15% ನಾಶಮಾಡಲಿದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ. ಲಕ್ಷಾಂತರ ಮರಗಳನ್ನು ಕಡಿದು, ಆಮೆ ಗೂಡುಗಳು ಮತ್ತು ಹವಳದ ದಿಬ್ಬಗಳಿರುವ ಕರಾವಳಿ ಪ್ರದೇಶದಲ್ಲಿ ಬಂದರು ನಿರ್ಮಿಸಲು ಯತ್ನಿಸುತ್ತಿರುವುದನ್ನು ಪ್ರಶ್ನಿಸಿದೆ.
ಸೋನಿಯಾ ಗಾಂಧಿಯವರ ಪ್ರಕಾರ, ಸರ್ಕಾರವು ಬುಡಕಟ್ಟು ಮಂಡಳಿ ಮತ್ತು ರಾಷ್ಟ್ರೀಯ ಪರಿಶಿಷ್ಟ ಬುಡಕಟ್ಟು ಆಯೋಗವನ್ನು ಸಂಪರ್ಕಿಸದೆ, ಅರಣ್ಯ ಹಕ್ಕುಗಳ ಕಾಯ್ದೆ ಹಾಗೂ ಭೂಸ್ವಾಧೀನ ಕಾಯ್ದೆಗಳನ್ನು ಉಲ್ಲಂಘಿಸಿದೆ. 2004ರ ಸುನಾಮಿ, ಇತ್ತೀಚಿನ ಭೂಕಂಪದಂತಹ ಅಪಾಯಗಳನ್ನು ನಿರ್ಲಕ್ಷಿಸಿ, ಭೂಕಂಪ ಸೂಕ್ಷ್ಮ ವಲಯದಲ್ಲೇ ಯೋಜನೆ ರೂಪಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಈ ಯೋಜನೆಯನ್ನು ಬುಡಕಟ್ಟು ಹಕ್ಕುಗಳು ಮತ್ತು ರಾಷ್ಟ್ರೀಯ ಮೌಲ್ಯಗಳಿಗೆ ದ್ರೋಹ ಎಂದು ಕರೆದಿದ್ದು, ಜನತೆಗೆ ಇದರ ವಿರುದ್ಧ ಧ್ವನಿ ಎತ್ತುವಂತೆ ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa