ಹುಬ್ಬಳ್ಳಿ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಿರಿಯಾನಿ ಎಂದರೆ ಸಾಮಾನ್ಯವಾಗಿ ಕೋಳಿ, ಮಟನ್ ಅಥವಾ ತರಕಾರಿ ಬಿರಿಯಾನಿ ನೆನಪಿಗೆ ಬರುತ್ತದೆ. ಆದರೆ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದಾದ ನುಗ್ಗೆಕಾಯಿ ಬಳಸಿ ತಯಾರಿಸುವ ಬಿರಿಯಾನಿಯೂ ಸವಿಯಲು ಲಭ್ಯವಿದೆ. ಇದು ರುಚಿಯಲ್ಲಿ ಮಾತ್ರವಲ್ಲ, ಪೌಷ್ಟಿಕತೆಯಲ್ಲಿಯೂ ವಿಶೇಷವಾಗಿದೆ.
ಬೇಕಾಗುವ ಪದಾರ್ಥಗಳು:
ಅಕ್ಕಿ, ನುಗ್ಗೆಕಾಯಿ, ದಾಲ್ಚಿನ್ನಿ, ಏಲಕ್ಕಿ, ಲವಂಗ, ಚಕ್ರಮೊಗ್ಗು, ಈರುಳ್ಳಿ, ಟೊಮೆಟೋ, ಪುದೀನ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಹಸಿರು ಬಟಾಣಿ, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಬಿರಿಯಾನಿ ಪೌಡರ್, ಕಸೂರಿ ಮೇಥಿ, ಖಾರದ ಪುಡಿ, ಅಡುಗೆ ಎಣ್ಣೆ ಹಾಗೂ ಉಪ್ಪು.
ಮಾಡುವ ವಿಧಾನ:
ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ ದಾಲ್ಚಿನ್ನಿ, ಏಲಕ್ಕಿ, ಲವಂಗ, ಚಕ್ರಮೊಗ್ಗು, ಪಲಾವ್ ಎಲೆ ಹಾಕಿ ತಾಳಿಸಿ. ನಂತರ ಈರುಳ್ಳಿ ಬಾಡಿಸಿ, ಅದಕ್ಕೆ ಪುದೀನ, ಕೊತ್ತಂಬರಿ, ಕಸೂರಿ ಮೇಥಿ, ಹಸಿರು ಮೆಣಸು ಮತ್ತು ಖಾರದ ಪುಡಿ ಸೇರಿಸಿ ಹುರಿಯಿರಿ.
ಅದರ ನಂತರ ಟೊಮೆಟೋ, ಬಟಾಣಿ, ನುಗ್ಗೆಕಾಯಿ ತುಂಡುಗಳು, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಶ್ರಣ ಮಾಡಿ, ಬಿರಿಯಾನಿ ಪೌಡರ್ ಹಾಗೂ ಉಪ್ಪು ಹಾಕಿ 5 ನಿಮಿಷ ಬೇಯಿಸಿ. ಈಗ ನೆನೆಸಿಟ್ಟ ಅಕ್ಕಿ ಹಾಕಿ, ಎರಡು ಪಟ್ಟು ನೀರು ಸೇರಿಸಿ ಕುದಿಯಲು ಬಿಡಿ. ನೀರು ಕಡಿಮೆಯಾಗುತ್ತಿದ್ದಂತೆ ಉರಿ ಸಣ್ಣ ಮಾಡಿ, ಬಾಣಲೆಗೆ ಮುಚ್ಚಳ ಹಾಕಿ 15 ನಿಮಿಷ ಬಿಟ್ಟು ಬೇಯಿಸಬೇಕು.
ಹೀಗೆ ಸಿದ್ಧವಾಗುವ ನುಗ್ಗೆಕಾಯಿ ಬಿರಿಯಾನಿಗೆ ಮೊಸರು ಬಜ್ಜಿ ಅಥವಾ ಕುರ್ಮಾ ಜೊತೆ ಸವಿದರೆ ಅದ್ಭುತ ರುಚಿ ನೀಡುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa