ನವದೆಹಲಿ, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮತ್ತು ಪಲ್ಲವಿ ಜೋಶಿ ನಿರ್ಮಾಣದ ವಿವಾದಾತ್ಮಕ ಚಿತ್ರ ‘ದಿ ಬೆಂಗಾಲ್ ಫೈಲ್ಸ್’ ನಾಳೆ (ಸೆ.5) ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಚಿತ್ರಮಂದಿರಗಳು ಈ ಚಿತ್ರವನ್ನು ಪ್ರದರ್ಶಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ನಿರ್ಮಾಪಕಿ ಪಲ್ಲವಿ ಜೋಶಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಸಹಾಯ ಕೋರಿದ್ದಾರೆ.
ಪಲ್ಲವಿ ಜೋಶಿ ತಮ್ಮ ಪತ್ರದಲ್ಲಿ, “ಬಂಗಾಳದ ಮಲ್ಟಿಪ್ಲೆಕ್ಸ್ ಸರಪಳಿಗಳು ಆಡಳಿತ ಪಕ್ಷದ ರಾಜಕೀಯ ಒತ್ತಡ ಮತ್ತು ಬೆದರಿಕೆಗಳಿಂದಾಗಿ ಚಿತ್ರವನ್ನು ಬಿಡುಗಡೆ ಮಾಡಲು ನಿರಾಕರಿಸಿರುವುದು ನೋವು ತಂದಿದೆ. ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿ, ಬಂಗಾಳದಲ್ಲಿ ಈ ಚಿತ್ರ ಬಿಡುಗಡೆಯಾಗುವಂತೆ ಮಾಡಲು ದಯವಿಟ್ಟು ಕ್ರಮ ಕೈಗೊಳ್ಳಬೇಕು” ಎಂದು ವಿನಂತಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಇಂತಹ ಸೆನ್ಸಾರ್ಶಿಪ್ ಪಶ್ಚಿಮ ಬಂಗಾಳದಲ್ಲಿ ಹೊಸದಲ್ಲ ಎಂದು ಹೇಳಿದ್ದಾರೆ. “ಹಿಂದೆ *‘ದಿ ಕೇರಳ ಸ್ಟೋರಿ’*ಗೂ ನ್ಯಾಯಾಲಯ ಅನುಮತಿ ನೀಡಿದ್ದರೂ, ಮಮತಾ ಬ್ಯಾನರ್ಜಿ ಆಡಳಿತದ ಒತ್ತಡದಿಂದ ಬಿಡುಗಡೆಯಾಗಲಿಲ್ಲ. ಇತ್ತೀಚೆಗೆ ಜಾವೇದ್ ಅಖ್ತರ್ ಅವರ ಕಾರ್ಯಕ್ರಮವನ್ನೂ ಮೂಲಭೂತವಾದಿ ಗುಂಪುಗಳ ಬೆದರಿಕೆ ಕಾರಣದಿಂದ ರದ್ದು ಮಾಡಬೇಕಾಯಿತು” ಎಂದು ಅವರು ಆರೋಪಿಸಿದರು.
“ಮಮತಾ ಬ್ಯಾನರ್ಜಿ ಅವರ ತುಷ್ಟೀಕರಣದ ರಾಜಕೀಯ ಈಗ ಹಾಸ್ಯಾಸ್ಪದ ಮಟ್ಟ ತಲುಪಿದೆ. ಇದು ಹುಲಿಯ ಮೇಲೆ ಸವಾರಿ ಮಾಡಿದಂತಾಗಿದೆ – ಅವಳಿಗೆ ಅದರಿಂದ ಇಳಿಯಲು ಸಾಧ್ಯವಿಲ್ಲ, ನಿಯಂತ್ರಿಸಲು ಸಾಧ್ಯವಿಲ್ಲ” ಎಂದು ಮಾಳವೀಯ ಟೀಕಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa