ನವದೆಹಲಿ, 4 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಎಥೆನಾಲ್ ನೀತಿ ಮತ್ತು ಪೆಟ್ರೋಲ್–ಡೀಸೆಲ್‌ನ ಏರಿದ ಬೆಲೆ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪಕ್ಷದ ವಕ್ತಾರ ಪವನ್ ಖೇರಾ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 2014ರಲ್ಲಿ ನೀಡಿದ್ದ ಭರವಸೆಗಳು ಖಾಲಿ ಘೋಷಣೆಗಳಾಗಿದ್ದು, ಇಂಧನ ಬೆಲೆಯಲ್ಲಿ ಯಾವುದೇ ಪರಿಹಾರ ದೊರಕಿಲ್ಲ ಎಂದು ಟೀಕಿಸಿದರು.
ನಗರ ತ್ಯಾಜ್ಯ ಮತ್ತು ಮರದ ಪುಡಿಯಿಂದ ಎಥೆನಾಲ್ ಉತ್ಪಾದನೆಗಾಗಿ 2018ರಲ್ಲಿ ಐದು ದೊಡ್ಡ ಸ್ಥಾವರಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಲಾಯಿತಾದರೂ, ಇಂದಿನವರೆಗೂ ಒಂದು ಲೀಟರ್ ಎಥೆನಾಲ್ ಕೂಡಾ ಆ ಮಾರ್ಗದಲ್ಲಿ ಉತ್ಪಾದನೆಯಾಗಿಲ್ಲ ಎಂದು ಹೇಳಿದರು. ಈಗ ಉತ್ಪಾದನೆಯಾದ 627 ಕೋಟಿ ಲೀಟರ್ ಎಥೆನಾಲ್‌ನಲ್ಲಿ ಶೇ.56 ಕಬ್ಬಿನಿಂದ, ಉಳಿದವು ಧಾನ್ಯಗಳಿಂದ ತಯಾರಿಸಲಾಗಿದೆ ಎಂದು ತಿಳಿಸಿದರು.
ಒಂದು ಲೀಟರ್ ಎಥೆನಾಲ್ ಉತ್ಪಾದನೆಗೆ ಸುಮಾರು 3,000 ಲೀಟರ್ ನೀರಿನ ಅವಶ್ಯಕತೆ ಇರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಖೇರಾ ಆತಂಕ ವ್ಯಕ್ತಪಡಿಸಿದರು. ರೈತರಿಗೆ ಮತ್ತು ಸಾರ್ವಜನಿಕರಿಗೆ ಎಥೆನಾಲ್ ಮಿಶ್ರಣದಿಂದ ಯಾವುದೇ ನೇರ ಲಾಭವಾಗಿಲ್ಲವೆಂದು ಎಂದರು.
2014ರಿಂದ 2025ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಮೂಲಕ ಸಂಗ್ರಹವಾದ ಸುಮಾರು 40 ಲಕ್ಷ ಕೋಟಿ ರೂ.ಗಳ ಲೆಕ್ಕವನ್ನು ಜನರಿಗೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa