ನಾಗ್ಪುರ, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಬಜಾರ್‌ಗಾಂವ್‌ನಲ್ಲಿರುವ ಸೋಲಾರ್ ಗ್ರೂಪ್‌ಗೆ ಸೇರಿದ ರಕ್ಷಣಾ ವಲಯದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ ನಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿ, 16 ಮಂದಿ ಗಾಯಗೊಂಡಿದ್ದಾರೆ.
ಮೃತ ಕಾರ್ಮಿಕನನ್ನು ಮೇಲ್ವಿಚಾರಕ ಮಯೂರ್ ಗನ್ವೀರ್ (25) ಎಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಸ್ಫೋಟವು ಕಂಪನಿಯ PP-15 ಘಟಕದಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಕೆಲ ಕಾರ್ಮಿಕರು ಪಾರಾಗಲು ಸಾಧ್ಯವಾಯಿತು. ಸ್ಫೋಟದ ಪ್ರತಿಧ್ವನಿಯು ಶಿವ, ಸವಂಗಾ, ಬಜಾರ್‌ಗಾಂವ್ ಸೇರಿದಂತೆ ಹತ್ತಿರದ ಹತ್ತು ಹಳ್ಳಿಗಳವರೆಗೂ ಕೇಳಿ ನಾಗರಿಕರಲ್ಲಿ ಭೀತಿಯ ವಾತಾವರಣ ಉಂಟಾಯಿತು.
ಗಾಯಾಳುಗಳಲ್ಲಿ ಕೈಲಾಶ್ ವರ್ಮಾ, ಮನೀಶ್ ವರ್ಮಾ, ಸನ್ನಿ ಕುಮಾರ್, ಅರುಣ್ ಕುಮಾರ್, ಅತುಲ್ ಮಾದವಿ, ಸೌರಭ್ ಡೋಂಗ್ರೆ, ತೇಜಸ್ ಬಂಧಾಟೆ, ಸೂರಜ್ ಗುಟ್ಕೆ, ಅಖಿಲ್ ಬಾವ್ನೆ, ಧರಂಪಾಲ್ ಮನೋಹರ್ ಸೇರಿದಂತೆ ಹಲವರಿದ್ದಾರೆ. ಇವರಲ್ಲಿ 14 ಜನರನ್ನು ನಾಗ್ಪುರದ ದಂಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರನ್ನು ಧಂತೋಲಿಯ ರಥಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸ್ಫೋಟದಿಂದ ಕಂಪನಿಯ ಯಂತ್ರೋಪಕರಣಗಳು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟುಹೋಗಿವೆ. ಘಟನೆಯ ನಂತರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಅವರ ಫೌಂಡೇಶನ್‌ನಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಗಾಯಾಳುಗಳಲ್ಲಿ 6 ಮಂದಿಯನ್ನು ನಾಗ್ಪುರಕ್ಕೆ ಕಳುಹಿಸಲಾಯಿತು.
ಸೋಲಾರ್ ಗ್ರೂಪ್ ಸಂಸ್ಥೆ ಭಾರತದ ರಕ್ಷಣಾ ವಲಯಕ್ಕೆ ಮಾತ್ರವಲ್ಲದೆ 30ಕ್ಕೂ ಹೆಚ್ಚು ದೇಶಗಳಿಗೆ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆ. ಆದರೆ ಈ ಕಾರ್ಖಾನೆಯಲ್ಲಿ ಆಗಾಗ್ಗೆ ಅಪಘಾತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಸುರಕ್ಷತೆಯ ಕಡೆ ನಿರ್ಲಕ್ಷ್ಯವಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇತ್ತೀಚಿನ ಸ್ಫೋಟವು ಕಂಪನಿಯ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa