ಪಲಮು, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಾರ್ಖಂಡ್‌ನ ಪಲಮು ಜಿಲ್ಲೆಯ ಮನಾಟು ಪೊಲೀಸ್ ಠಾಣೆ ವ್ಯಾಪ್ತಿಯ ಕೇದಲ್ ಕಾಡಿನಲ್ಲಿ ಬುಧವಾರ ರಾತ್ರಿ ಭೀಕರ ಎನ್‌ಕೌಂಟರ್ ನಡೆದಿದೆ. ನಿಷೇಧಿತ ಉಗ್ರ ಸಂಘಟನೆ ಟಿಎಸ್‌ಪಿಸಿ ಕಮಾಂಡರ್ ಶಶಿಕಾಂತ್ ನೇತೃತ್ವದ ತಂಡದೊಂದಿಗೆ ಪೊಲೀಸರು ಗುಂಡಿನ ಚಕಮಕಿ ನಡೆಸಿದ್ದಾರೆ.
ಈ ಎನ್‌ಕೌಂಟರ್‌ನಲ್ಲಿ ಜಿಲ್ಲಾ ಪೊಲೀಸ್ ಪಡೆಯ ಇಬ್ಬರು ಜವಾನರಾದ ಸಂತನ್ ಮೆಹ್ತಾ ಮತ್ತು ಸುನಿಲ್ ರಾಮ್ ಹುತಾತ್ಮರಾಗಿದ್ದಾರೆ, ಮತ್ತೊಬ್ಬ ಜವಾನ ರೋಹಿತ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಜವಾನನನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಲಮು ಎಸ್‌ಪಿ ರಿಷ್ಮಾ ರಮೇಶನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಜವಾನನ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಎನ್ಕೌಂಟರ್ ನಂತರ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರೆದು ವಿಸ್ತೃತ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಮಾಹಿತಿಯ ಪ್ರಕಾರ, ಬುಧವಾರ ಸಂಜೆ ಟಿಎಸ್‌ಪಿಸಿಯ ಶಶಿಕಾಂತ್ ತಂಡವು ಕೇದಲ್ ಗ್ರಾಮದಲ್ಲಿ ಅಪರಾಧದ ಯೋಜನೆ ರೂಪಿಸುತ್ತಿದೆ ಎಂಬ ಗುಪ್ತಚರ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಎಸ್‌ಪಿ ಕ್ಯಾಂಪೇನ್ ರಾಕೇಶ್ ಕುಮಾರ್ ಹಾಗೂ ಹುಸೇನಾಬಾದ್ ಎಸ್‌ಡಿಪಿಓ ಎಸ್. ಮೊಹಮ್ಮದ್ ಯಾಕೂಬ್ ನೇತೃತ್ವದಲ್ಲಿ ವಿಶೇಷ ದಾಳಿ ನಡೆಸಲಾಯಿತು.
ರಾತ್ರಿ 12:30ಕ್ಕೆ ಶೋಧ ಕಾರ್ಯಾಚರಣೆ ವೇಳೆ ಉಗ್ರರು ಪೊಲೀಸರನ್ನು ಕಂಡ ತಕ್ಷಣ ಗುಂಡಿನ ದಾಳಿ ನಡೆಸಿದರು. ಪ್ರತಿಯಾಗಿ ಪೊಲೀಸರು ಸಹ ತೀವ್ರ ಪ್ರತಿದಾಳಿ ನಡೆಸಿದರು. ಈ ವೇಳೆ ಕೆಲವು ನಕ್ಸಲರು ಗಾಯಗೊಂಡು ಸಾವನ್ನಪ್ಪಿರುವ ಶಂಕೆ ಇದ್ದರೂ, ಅವರ ಶವಗಳು ಇನ್ನೂ ಪತ್ತೆಯಾಗಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa