ನವದೆಹಲಿ, 30 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ, ದೆಹಲಿ ಬಿಜೆಪಿ ಘಟಕದ ಪ್ರಥಮ ಅಧ್ಯಕ್ಷ, ಪ್ರೊಫೆಸರ್ ವಿಜಯ್ ಕುಮಾರ್ ಮಲ್ಹೋತ್ರಾ (94) ಅವರು ಇಂದು ಬೆಳಿಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಐದು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಮಲ್ಹೋತ್ರಾ ಅವರು 2004ರ ಸಾರ್ವತ್ರಿಕ ಚುನಾವಣೆಯಲ್ಲಿ ದೆಹಲಿಯಲ್ಲಿ ಬಿಜೆಪಿ ಪರ ಗೆದ್ದ ಏಕೈಕ ಅಭ್ಯರ್ಥಿಯಾಗಿದ್ದರು. ಉತ್ತಮ ವ್ಯಕ್ತಿತ್ವ ಹೊಂದಿದ ನಾಯಕರಾಗಿ ಅವರು ಜನಮನದಲ್ಲಿ ವಿಶೇಷ ಸ್ಥಾನ ಗಳಿಸಿದ್ದರು.
ಡಿಸೆಂಬರ್ 3, 1931ರಂದು ಲಾಹೋರ್ (ಈಗ ಪಾಕಿಸ್ತಾನ) ನಲ್ಲಿ ಜನಿಸಿದ ಮಲ್ಹೋತ್ರಾ ಅವರು ಹಿಂದಿ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ರಾಜಕೀಯದ ಜೊತೆಗೆ ಚೆಸ್ ಹಾಗೂ ಬಿಲ್ಲುಗಾರಿಕೆ ಸಂಘಟನೆಗಳ ನಿರ್ವಹಣೆಯಲ್ಲೂ ಅವರು ತೊಡಗಿಸಿಕೊಂಡಿದ್ದರು. ಜನಸಂಘದ ಕಾಲದಲ್ಲಿ ಆರ್‌ಎಸ್‌ಎಸ್ ಸಿದ್ಧಾಂತ ಹರಡಲು ಅವರು ಸಕ್ರಿಯವಾಗಿ ಶ್ರಮಿಸಿದ್ದರು.
1970–75ರ ಅವಧಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಕೌನ್ಸಿಲರ್ ಆಗಿದ್ದಾಗ, ಪಟೇಲ್ ನಗರವನ್ನು ಮೋತಿ ನಗರಕ್ಕೆ ಸಂಪರ್ಕಿಸುವ ದೆಹಲಿಯ ಮೊದಲ ಫ್ಲೈಓವರ್ ನಿರ್ಮಾಣಕ್ಕೆ ಅವರು ಮುಂದಾಗಿದ್ದರು.
ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಸಂತಾಪ ಸೂಚಿಸಿ, “ಪ್ರೊ. ಮಲ್ಹೋತ್ರಾ ಅವರ ಜೀವನ ಸರಳತೆ ಮತ್ತು ಸಾರ್ವಜನಿಕ ಸೇವೆಗೆ ಸಮರ್ಪಿತವಾಗಿತ್ತು. ಅವರ ಬಾಳು ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa