ವಾಷಿಂಗ್ಟನ್, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ವರ್ಜೀನಿಯಾದ ಮೆರೈನ್ ಕಾರ್ಪ್ಸ್ ಬೇಸ್ ಕ್ವಾಂಟಿಕೊದಲ್ಲಿ ನಡೆಯಲಿರುವ ರಾಷ್ಟ್ರದ ಉನ್ನತ ಮಿಲಿಟರಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ವೇತಭವನ ದೃಢಪಡಿಸಿದೆ.
ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಎಲ್ಲಾ ಜನರಲ್‌ಗಳು ಸಭೆಯಲ್ಲಿ ಹಾಜರಾಗುವಂತೆ ಕಳೆದ ವಾರವೇ ಆದೇಶ ಹೊರಡಿಸಿದ್ದರು. ಹಾಜರಾಗದ ಅಧಿಕಾರಿಗಳು ತಮ್ಮ ಗೈರುಹಾಜರಿಗೆ ಸೂಕ್ತ ಕಾರಣ ನೀಡಬೇಕು ಎಂದು ಅವರು ಎಚ್ಚರಿಸಿದ್ದಾರೆ. ಸಿಎನ್‌ಎನ್ ವರದಿ ಪ್ರಕಾರ, ಈ ಸಭೆಯನ್ನು “ಶಕ್ತಿ ಪ್ರದರ್ಶನ”ವೆಂದು ಪರಿಗಣಿಸಲಾಗುತ್ತಿದೆ.
ಸಭೆಯ ವೇಳೆ ಟ್ರಂಪ್ ಉನ್ನತ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೆಂಟಗನ್ ಸುತ್ತಮುತ್ತ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಅಧ್ಯಕ್ಷರ ಸುರಕ್ಷತೆಯನ್ನು ಸೀಕ್ರೆಟ್ ಸರ್ವಿಸ್ ನೋಡಿಕೊಳ್ಳಲಿದೆ. ಕಾರ್ಯಕ್ರಮವು ಮೆರೈನ್ ಕಾರ್ಪ್ಸ್ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಬೆಳಿಗ್ಗೆ ನಡೆಯಲಿದೆ.
ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಟ್ರಂಪ್ ಅವರ ಉಪಸ್ಥಿತಿಯು ಹೆಗ್ಸೆತ್ ಅವರ ಯೋಜಿತ ಭಾಷಣವನ್ನು ಮರೆಮಾಡುವ ಸಾಧ್ಯತೆಯಿದೆ. ಇದಲ್ಲದೆ, ಇಂತಹ ದೊಡ್ಡ ಮಟ್ಟದ ಸಭೆ “ಅಭೂತಪೂರ್ವ” ಎಂದು ವರದಿ ತಿಳಿಸಿದೆ.
ಆದರೆ, ಉತಾಹ್ ನ್ಯಾಷನಲ್ ಗಾರ್ಡ್‌ನ ನಾಲ್ವರು ಜನರಲ್‌ಗಳಿಗೆ ಸಭೆಯ ಆಹ್ವಾನ ನೀಡಲಾಗಿಲ್ಲ ಎಂದು ದಿ ಸಾಲ್ಟ್ ಲೇಕ್ ಟ್ರಿಬ್ಯೂನ್ ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಲು ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ನಿರಾಕರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa