ದುಬೈ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಏಷ್ಯಾ ಕಪ್ 2025 ಫೈನಲ್‌ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ದಾಖಲೆಯ ಒಂಬತ್ತನೇ ಬಾರಿ ಪ್ರಶಸ್ತಿ ಗಿಟ್ಟಿಸಿಕೊಂಡ ಭಾರತ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಯಿತು.
ಭಾರತೀಯ ಆಟಗಾರರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಹಾಗೂ ಪಾಕಿಸ್ತಾನ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಅಥವಾ ಪದಕಗಳನ್ನು ಸ್ವೀಕರಿಸಲು ನಿರಾಕರಿಸಿದರು. ಇದರಿಂದ ಸಮಾರಂಭವನ್ನು ಮಧ್ಯದಲ್ಲಿ ನಿಲ್ಲಿಸಬೇಕಾಯಿತು.
ಪಂದ್ಯ ಅಂತ್ಯವಾದ ಬಳಿಕ, ಟ್ರೋಫಿ ಪ್ರದಾನ ಕಾರ್ಯಕ್ರಮ ಒಂದು ಗಂಟೆ ತಡವಾಗಿ ಪ್ರಾರಂಭವಾಯಿತು. ನಿರೂಪಕ ಸೈಮನ್ ಡೂಲ್ ಪ್ರಕಾರ, ಮೊದಲು ನಖ್ವಿ ಪಾಕಿಸ್ತಾನಿ ಆಟಗಾರರಿಗೆ ರನ್ನರ್-ಅಪ್ ಪದಕಗಳನ್ನು ನೀಡಬೇಕಿತ್ತು. ಆದರೆ ಬದಲಾಗಿ ಬಾಂಗ್ಲಾದೇಶದ ಅಮೀನುಲ್ ಇಸ್ಲಾಂ ಪದಕ ವಿತರಿಸಿದರು. ನಖ್ವಿ ಕೇವಲ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಅವರಿಗೆ ಮಾತ್ರ ರನ್ನರ್-ಅಪ್ ಚೆಕ್ ಹಸ್ತಾಂತರಿಸಿದರು.
ನಂತರ ಭಾರತೀಯ ಆಟಗಾರರು ವೇದಿಕೆಗೆ ಬಂದು ಪದಕ ಅಥವಾ ಟ್ರೋಫಿ ಸ್ವೀಕರಿಸದೆ, ಕೇವಲ ಚಾಂಪಿಯನ್ಸ್ ಬ್ಯಾನರ್ ಹಿಡಿದು ಸಂಭ್ರಮಿಸಿದರು.
ಗಮನಾರ್ಹವಾಗಿ, ಫೈನಲ್‌ಗೆ ಮುನ್ನವೇ ಭಾರತೀಯ ತಂಡವು ಪಾಕಿಸ್ತಾನ ಮಂಡಳಿಯ ಮುಖ್ಯಸ್ಥರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಲಿದೆ ಎಂಬ ಮಾಧ್ಯಮ ವರದಿಗಳು ಹರಿದಾಡಿದ್ದವು. ಪಂದ್ಯದ ನಂತರವೂ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡದೆ ದೂರ ಉಳಿದರು. ಸೂರ್ಯಕುಮಾರ್ ಯಾದವ್ ಟಾಸ್ ವೇಳೆ ಸಹ ಪಾಕಿಸ್ತಾನ ನಾಯಕನನ್ನು ಸ್ವಾಗತಿಸಲು ನಿರಾಕರಿಸಿದ್ದರು. ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಕೂಡ ಇದೇ ಧೋರಣೆ ಅನುಸರಿಸಿದರು.
ಈ ವಿದ್ಯಮಾನದಿಂದ ಫೈನಲ್ ಜಯದ ಸಂಭ್ರಮಕ್ಕಿಂತ, ಪ್ರಶಸ್ತಿ ಪ್ರದಾನ ಸಮಾರಂಭದ ರಾಜಕೀಯ ಬಣ್ಣ ಹೆಚ್ಚು ಚರ್ಚೆಗೆ ಕಾರಣವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa