ಮುಂಬಯಿ, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ, ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಮತ್ತು ಟ್ರಿಗ್ಗರ್ ಹ್ಯಾಪಿ ಸ್ಟುಡಿಯೋಸ್ ಬಹುನಿರೀಕ್ಷಿತ ‘120 ಬಹದ್ದೂರ್’ ಚಿತ್ರದ ಎರಡನೇ ಟೀಸರ್ ಬಿಡುಗಡೆ ಮಾಡಿದೆ.
ಪವರ್‌ಫುಲ್ ಮೋಷನ್ ಪೋಸ್ಟರ್ ಬಳಿಕ ಬಂದಿರುವ ಈ ಹೊಸ ಟೀಸರ್ ಉತ್ಸಾಹ, ಭಾವುಕತೆ ಮತ್ತು ದೇಶಭಕ್ತಿಯಿಂದ ತುಂಬಿದೆ.
ಟೀಸರ್‌ನಲ್ಲಿ ಲತಾ ಮಂಗೇಶ್ಕರ್ ಅವರ ಶಾಶ್ವತ ಗಾನ “ಏ ಮೇರೆ ವತನ್ ಕೆ ಲೋಗೆನ್” ಪ್ರತಿಧ್ವನಿಸುತ್ತದೆ. ಕವಿ ಪ್ರದೀಪ್ ಬರೆದ ಈ ಹಾಡು 1962ರ ಇಂಡೋ–ಚೀನಾ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಸಮರ್ಪಿತವಾಗಿದ್ದು, ಲತಾ ಅವರ ಗಾಯನದಿಂದ ಅಮರತೆಯನ್ನು ಪಡೆದಿತ್ತು.
ಚಿತ್ರವು ರೆಜಾಂಗ್ ಲಾ ಯುದ್ಧವನ್ನು ಆಧರಿಸಿಕೊಂಡಿದ್ದು, ಚಾರ್ಲಿ ಕಂಪನಿಯ ಸೈನಿಕರ ಶೌರ್ಯ, ಸಹೋದರತ್ವ ಮತ್ತು ತ್ಯಾಗವನ್ನು ದೊಡ್ಡ ಪರದೆಗೆ ತರುತ್ತದೆ. ಪ್ರತಿಯೊಂದು ದೃಶ್ಯದಲ್ಲಿಯೂ ಸೈನಿಕರ ಅಚಲ ಧೈರ್ಯವನ್ನು ಹೈಲೈಟ್ ಮಾಡಲಾಗಿದೆ.
ಈ ಚಿತ್ರದಲ್ಲಿ ಫರ್ಹಾನ್ ಅಖ್ತರ್ ಮೇಜರ್ ಶೈತಾನ್ ಸಿಂಗ್ ಭಾಟಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 13 ಕುಮಾವೂನ್ ರೆಜಿಮೆಂಟ್‌ನ ಸೈನಿಕರೊಂದಿಗೆ ಅವರು ಅಸಾಧಾರಣ ಶೌರ್ಯ ಪ್ರದರ್ಶಿಸಿದ ಘಟನೆ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ಲಡಾಖ್‌ನ ರಮಣೀಯ ಕಣಿವೆಗಳಲ್ಲಿ ನಡೆದ ಚಿತ್ರೀಕರಣವು ಚಿತ್ರಕ್ಕೆ ವಿಶೇಷ ದೃಶ್ಯ ವೈಭವ ನೀಡಲಿದೆ.
ರಜನೀಶ್ ಘಾಯ್ ನಿರ್ದೇಶನ ಹಾಗೂ ರಿತೇಶ್ ಸಿಧ್ವಾನಿ–ಫರ್ಹಾನ್ ಅಖ್ತರ್ ನಿರ್ಮಾಣದ ‘120 ಬಹದ್ದೂರ್’ ಕೇವಲ ಯುದ್ಧಗಾಥೆಯಲ್ಲ, ರೆಜಾಂಗ್ ಲಾದ ಅನಾಮಿಕ ವೀರರಿಗೆ ಸಲ್ಲಿಸಿರುವ ಹೃತ್ಪೂರ್ವಕ ನಮನವಾಗಿದೆ.
ಚಿತ್ರವು ನವೆಂಬರ್ 21, 2025 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa