ಕೋಲಾರ, ೨೭ ಸೆಪ್ಟೆಂಬರ್(ಹಿ.ಸ) :
ಆ್ಯಂಕರ್ : ಕೋಲಾರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಪ್ರವಾಸಗಳ ಏರ್ಪಾಡು, ಪ್ರವಾಸಿ ಏಜೆಂಟರ ನೇಮಕ ಹಾಗೂ ವಾರಾಂತ್ಯದ ಕೋಲಾರ ದರ್ಶನ ಸಾರಿಗೆ ಸಂಸ್ಥೆ ಬಸ್ ಪ್ರವಾಸವನ್ನು ಶೀಘ್ರ ಆರಂಭಿಸುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ತುಕಾರಾಂ ಎನ್.ಪವಾರ್ ಹೇಳಿದರು.
ಕೋಲಾರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಲಾರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಚ್ಚಳಕ್ಕೆ ವಿಫುಲ ಅವಕಾಶಗಳು ಇದ್ದರೂ, ಇಚ್ಛಾಶಕ್ತಿಯ ಕೊರತೆ ಹಾಗೂ ಪ್ರವಾಸಿಗರ ಸುಲಿಗೆ ಮಾಡುತ್ತಿರುವ ಘಟನೆಗಳಿಂದಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಚ್ಚಳವಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮವು ವಿಶ್ವದಲ್ಲಿಯೇ ಅತಿ ದೊಡ್ಡ ಎರಡನೇ ಉದ್ದಿಮೆಯಾಗಿದ್ದು, ಕೋಲಾರ ಜಿಲ್ಲೆಗೆ ೨೪ ಗಂಟೆಗಳೊಳಗಾಗಿ ಭೇಟಿ ನೀಡಿ ವಾಪಸಾಗುವ ವಿಹಾರಾರ್ಥಿಗಳು ಹಾಗೂ ಇಲ್ಲಿಯೇ ವಾಸ್ತವ್ಯ ಇರುವ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಒಂದು ವರ್ಷದೊಳಗೆ ಕ್ರಮವಹಿಸಿ, ಮುಂದಿನ ಪ್ರವಾಸೋದ್ಯಮ ದಿನಾಚರಣೆಯನ್ನು ದೊಡ್ಡ ವೇದಿಕೆಯಲ್ಲಿ ಆಚರಿಸಲು ಪ್ರಯತ್ನಿಸುವುದಾಗಿ ವಿವರಿಸಿದರು.
ಜಿಲ್ಲೆಯಲ್ಲಿ ಪ್ರವಾಸಿ ಮಾರ್ಗದರ್ಶಿಗಳು ಉತ್ಸಾಹದಿಂದ ಗೈರು ಹಾಜರಾಗದೆ ಕಾರ್ಯನಿರ್ವಹಿಸುತ್ತಿದ್ದಾರೆ, ಪ್ರವಾಸಿ ತಾಣಗಳ ಜೊತೆಗೆ ಉತ್ತಮ ಹೋಟೆಲ್, ಆಹಾರ ವೈವಿಧ್ಯತೆಯನ್ನು ಪರಿಚಯಿಸುವ ತಾಣಗಳ ಸಂಖ್ಯೆಯು ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆವಹಿಸಿದ್ದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್.ಮುನಿಶಾಮಪ್ಪ ಮಾತನಾಡಿ, ಶಿಲಾ ಶಿಲ್ಪಗಳು ಮತ್ತು ವೀರಗಲ್ಲುಗಳ ಮಹತ್ವ ಅರಿಯದೆ ಕಟ್ಟಡ ನಿರ್ಮಾಣಕ್ಕೆ ಬಳಸುವುದು ಹಾಗೂ ಧಾರ್ಮಿಕ ಮಹತ್ವ ಕಲ್ಪಿಸಿ ಪೂಜೆಗೊಳಪಡಿಸುವುದರ ಬದಲು ಜಿಲ್ಲೆಯ ಐತಿಹ್ಯಗಳ ಕುರುಹುಗಳನ್ನು ಜತನದಿಂದ ಕಾಪಾಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಇತಿಹಾಸ ಪ್ರeಯನ್ನು ಜಾಗೃತಗೊಳಿಸಬೇಕಿದೆ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರವಾಸೋದ್ಯಮ ಕೋರ್ಸಿನ ಮುಖ್ಯಸ್ಥ ಮಹೇಶ್ ಮಾತನಾಡಿ, ಪ್ರವಾಸಗಳಿಗೆ ಮಾನವನ ನಾಗರೀಕತೆಯಷ್ಟೇ ೩೫೦೦ ವರ್ಷಗಳ ಇತಿಹಾಸವಿದೆ, ಪ್ರಸ್ತುತ ಉದ್ದಿಮೆಯಾಗಿದೆ, ೧೯೭೦ ರಿಂದಲೂ ವಿಶ್ವ ಪ್ರವಾಸಿ ಸಂಸ್ಥೆಯು ವಿಶ್ವ ಪ್ರವಾ ಸೋದ್ಯಮ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ಬಾರಿ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಪ್ರತಿ ವರ್ಷ ೨.೫ ಮಿಲಿಯನ್ ಟನ್ ಪ್ಲಾಸ್ಟಿಕ್ ಕಸವು ವಿಶ್ವದಾದ್ಯಂತ ಪ್ರವಾಸಿ ತಾಣಗಳಲ್ಲಿ ಸಂಗ್ರಹವಾಗುತ್ತಿದೆ, ಪ್ರತಿ ವರ್ಷ ಪ್ಯಾರಿಸ್ ನಗರಕ್ಕೆ ೨೫ ಮಿಲಿಯನ್ ಪ್ರವಾಸಿಗರು ಭೇಟಿ ಕೊಟ್ಟರೆ, ಇಡೀ ಭಾರತ ದೇಶಕ್ಕೆ ಕೇವಲ ೧೩ ಮಿಲಿಯನ್ ಪ್ರವಾಸಿಗರು ಮಾತ್ರವೇ ಭೇಟಿ ಕೊಡುತ್ತಿದ್ದಾರೆ, ಪ್ರವಾಸಿ ಕೇಂದ್ರಗಳನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾದರೆ, ಭಾರತವು ವಿಶ್ವದ ಅತಿ ದೊಡ್ಡ ಪ್ರವಾಸಿ ಕೇಂದ್ರವಾಗಲಿದೆ ಎಂದರು.
ಪತ್ರಕರ್ತರ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಈ ವರ್ಷದ ಸುಸ್ಥಿರ ಪರಿವರ್ತನೆಯ ಧ್ಯೇಯ ವಾಕ್ಯವು ಕೋಲಾರ ಜಿಲ್ಲೆಗೆ ಹೆಚ್ಚು ಅನ್ವಯವಾಗಬೇಕಿದೆ, ಭಾಷಾ ಸೌಹಾರ್ದತೆಯ ಕೋಲಾರ ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ, ಭೌಗೋಳಿಕವಾಗಿ, ಧಾರ್ಮಿಕ, ಪೌರಾಣಿಕ, ಐತಿಹಾಸಿಕ, ಚಾರಣ ಪೂರಕ, ಸಾಂಸ್ಕೃತಿಕ ಮಹತ್ವ ಸಾರುವ ನೂರಾರು ಕೇಂದ್ರಗಳಿದ್ದು, ಅವುಗಳನ್ನು ಪ್ರವಾಸಿ ತಾಣಗಳಾಗಿ ಮಾರ್ಪಡಿಸಿ, ಮೂಲ ಸೌಕರ್ಯ ಕಲ್ಪಿಸಿದರೆ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದು, ಇದಕ್ಕಾಗಿ ಕ್ರಿಯಾಯೋಜನೆ ತಯಾರಿಸಿ ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಲು ಜನಪ್ರತಿನಿಗಳು, ಅಕಾರಿಗಳು, ವಿದ್ಯಾರ್ಥಿ ಸಮೂಹ, ಸಾರ್ವಜನಿಕರು ಒಂದಾಗಿ ಕೈಜೋಡಿಸಬೇಕಾಗಿದೆ ಎಂದರು.
ಇತಿಹಾಸ ಪ್ರಾಧ್ಯಾಪಕ ಡಾ.ಅರಿವು ಶಿವಪ್ಪ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಹತ್ತನೇ ಶತಮಾನದಲ್ಲಿಯೇ ಸಾವಿನಾರ್ಮಿಡಿ ಎಂಬ ಮಹಿಳೆಯೊಬ್ಬರು ಸಕಲ ವಿದ್ಯೆ ಪಾರಂಗತವಾಗಿರುವ ಶಾಸನ ಬೆಂಗಳೂರಿನಲ್ಲಿದೆ, ಜಿಲ್ಲೆಯಲ್ಲಿ ಇಂತ ಮಹತ್ವಗಳನ್ನು ಹೊಂದಿರುವ ಪ್ರತಿ ಗ್ರಾಮವು ಪ್ರವಾಸಿ ಕೇಂದ್ರವಾಗುವ ಅರ್ಹತೆ ಪಡೆದುಕೊಂಡಿದೆ, ಅರಾಭಿಕೊತ್ತನೂರಿನಲ್ಲಿ ವೀರಗಲ್ಲುಗಳ ಪಾರ್ಕ್ ನಿರ್ಮಾಣ ಮಾಡಿರುವುದು ಇದಕ್ಕೆ ಉಧಾಹರಣೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಅತ್ಯುತ್ತಮ ಪ್ರವಾಸಿ ಮಾರ್ಗದರ್ಶಿ ಪ್ರಶಸ್ತಿಯನ್ನು ರೆಡ್ಡೆಮ್ಮ ರಿಗೆ ನೀಡಿ ಗೌರವಿಸಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಾದ ಎಂ.ಹರ್ಷಿತಾ, ಎಂ.ತೇಜಸ್ವಿನಿ, ಎಂ.ಚಂದನ, ಚಿತ್ರಕಲೆ ಸ್ಪರ್ಧೆಯಲ್ಲಿ ಗೆದ್ದ ಉಮೇರಾ, ಎಂ.ದಿನೇಶ್, ಎಂ.ಸುಪ್ರಜಾ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಟಿ.ಎಸ್. ರುದ್ರಕುಮಾರ್, ಎಂ.ಅಮೃತವರ್ಷಿಣಿ, ಟಿ.ಎಂ.ಸ್ಪಪ್ನ ಹಾಗೂ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ರುದ್ರಕುಮಾರ್, ಆರ್.ಸುಪ್ರೀತ್, ನಾಗಭೂಷಣ್ ಮತ್ತು ಬಿ.ನಿತಿನ್ಕುಮಾರ್ರಿಗೆ ಬಹುಮಾನಗಳನ್ನು ನೀಡಿ ಸತ್ಕರಿಸಲಾಯಿತು.
ಚಿತ್ರ ; ಕೋಲಾರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ತುಕಾರಾಂ ಎನ್.ಪವಾರ್ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್