ಕೋಲಾರ, ೨೭ ಸೆಪ್ಟೆಂಬರ್(ಹಿ.ಸ) :
ಆ್ಯಂಕರ್ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಮೀಸಲಾತಿಯನ್ನು ಪರಿಪಾಲನೆ ಮಾಡದೆ ಸಣ್ಣ ಸಣ್ಣ ಕಾಮಗಾರಿಗಳನ್ನು ಒಗ್ಗೂಡಿಸಿ ಪ್ಯಾಕೇಜ್ ಮಾಡಿ ಟೆಂಡರ್ ಮಾಡಿದ್ದರಿಂದ ಜಿಲ್ಲೆಯ ಸಾಮಾನ್ಯ ಗುತ್ತಿಗೆದಾರರಿಗೆ ಅನ್ಯಾಯವಾಗಿದ್ದು ಕೂಡಲೇ ಪ್ಯಾಕೇಜ್ ಟೆಂಡರ್ ಕೈಬಿಡಬೇಕು ಎಂದು ಎಸ್ಸಿ ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಮಾರ್ಜೇನಹಳ್ಳಿ ವಿ.ಬಾಬು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ರಚನೆಗೆ ಎಸ್ಸಿ ಎಸ್ಟಿ, ಹಿಂದುಳಿದ ಹಾಗೂ ಅಹಿಂದ ವರ್ಗಗಳ ಮತದಾರರು ಕಾರಣವಾಗಿದ್ದಾರೆ ಇವತ್ತು ಸಂವಿಧಾನದ ಅಡಿಯಲ್ಲಿ ಗುತ್ತಿಗೆ ಮೀಸಲಾತಿ ಸಿಗುತ್ತಿಲ್ಲ ಸರ್ಕಾರದ ಆದೇಶವನ್ನು ಸಂಬಂಧಿಸಿದ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಜಾರಿ ಮಾಡದೆ ವಂಚನೆ ಮಾಡಿದ್ದಾರೆ ಜಿಲ್ಲೆಯಲ್ಲಿ ೫ ರಿಂದ ೬ ಕಾಮಗಾರಿಗಳನ್ನು ಒಂದು ಪ್ಯಾಕೇಜ್ ರೀತಿಯಲ್ಲಿ ಕಾಮಗಾರಿ ಮಾಡಿ ಅನುದಾನ ನೀಡಲು ಅಧಿಕಾರಿಗಳು ಟೆಂಡರ್ ಕರೆದಿದ್ದಾರೆ ಬೇರೆ ಬೇರೆ ಜಿಲ್ಲೆಗಳ ಪ್ರಭಾವಿಗಳಿಗೆ ಟೆಂಡರ್ ನೀಡಿ ಜಿಲ್ಲೆಯ ಗುತ್ತಿಗೆದಾರರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಮಾಲೂರು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೨೦ ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಬೃಹತ್ ಪ್ಯಾಕೇಜ್ ರೂಪಿಸಿ ಟೆಂಡರ್ ಕರೆದಿದ್ದಾರೆ ಸರ್ಕಾರದ ಆದೇಶದಂತೆ ಎಸ್ಸಿ ಎಸ್ಟಿ ಗುತ್ತಿಗೆದಾರರಿಗೆ ೨೪.೦೧% ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ೧೯% ಮೀಸಲಾತಿಯನ್ನು ಜಾರಿ ಮಾಡಬೇಕಾಗಿದೆ ಆದರೆ ಸುಮಾರು ನಾಲ್ಕೈದು ಪ್ಯಾಕೇಜ್ ಟೆಂಡರ್ ಕರೆದು ನಮ್ಮಂತಹ ಸಾಮಾನ್ಯ ಗುತ್ತಿಗೆದಾರರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
ದಲಿತರು ಹಾಗೂ ಹಿಂದುಳಿದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವೇ ಸಾಮಾಜಿಕ ನ್ಯಾಯದಡಿ ಗುತ್ತಿಗೆದಾರರಿಗೆ ಮೀಸಲಾತಿ ನೀಡಿದೆ. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆಯಾಗಿ ನಮ್ಮಂತಹ ಗುತ್ತಿಗೆದಾರರನ್ನು ವಂಚಿಸುತ್ತಿದ್ದಾರೆ ಇದರಿಂದಾಗಿ ನಮ್ಮ ಪಾಲಿಗೆ ಇದು ಮರಣ ಶಾಸನವಾಗಿದೆ ಸಾಕಷ್ಟು ಬಾರಿ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು ಪ್ರಯೋಜನವಾಗಿಲ್ಲ ಕೂಡಲೇ ಪ್ಯಾಕೇಜ್ ಕಾಮಗಾರಿ ರದ್ದು ಮಾಡಬೇಕು ಇಲ್ಲದೇ ಹೋದರೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್, ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಜಯರಾಮ್, ಕಾರ್ಯದರ್ಶಿ ನರೇಶ್ ಕುಮಾರ್, ಮಾಲೂರು ತಾಲೂಕು ಅಧ್ಯಕ್ಷ ಅಂಬರೀಷ್, ಮುಖಂಡರಾದ ಚಲಪತಿ, ಮಂಜುನಾಥ್, ಶಿವಣ್ಣ, ಸಾಗರ್ ಮುಂತಾದವರು ಇದ್ದರು.
ಚಿತ್ರ : ಕೋಲಾರ ನಗರದ ಪತ್ರಕರ್ತರ ಭವನದಲಿ ಪತ್ರಿಕಾಗೋಷ್ಠಿಯಲ್ಲಿ ಎಸ್ಸಿ ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಮಾರ್ಜೇನಹಳ್ಳಿ ವಿ.ಬಾಬು ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್