ವಿಜಯಪುರ, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬರಗಾಲ ಜಿಲ್ಲೆ ಎಂದು ಪ್ರಸಿದ್ದಿ, ನೀರಿಗೂ ತತ್ವಾರ ಇದ್ದ ವಿಜಯಪುರ ಇಂದು ಹಸರಿನಿಂದ ಕಂಗೊಳಿಸುತ್ತಿದೆ. ಪ್ರವಾಸೋದ್ಯಮ ಅಭಿವೃದ್ದಿಯೊಂದಿಗೆ ಪರಿವರ್ತನೆಯಡೆಗೆ ಸಾಗುತ್ತಿದೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಶನಿವಾರ ನಗರದ ಶಿವಗಿರಿಯಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವವಿಖ್ಯಾತ ಗೋಳಗುಮ್ಮಟದೊಂದಿಗೆ ಐತಿಹಾಸಿಕ ತಾಣಗಳುಳ್ಳ ವಿಜಯಪುರ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆ. ಸಚಿವ ಎಂ.ಬಿ.ಪಾಟೀಲರು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಕೈಗೊಂಡ ಹಲವು ನೀರಾವರಿ ಯೋಜನೆ, ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳಿಂದ ಇಂದು ಹಸಿರಿನಿಂದ ಕಂಗೊಳಿಸುತ್ತಿದೆ. ಇದರೊಂದಿಗೆ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ, ರಸ್ತೆ ಸಂಪರ್ಕವೂ ಇದೆ. ಕುಡಿಯುವ ನೀರಿನ ಸಮಸ್ಯೆ ಇಲ್ಲ.ನಗರದ ಐತಿಹಾಸಿಕ ಭಾವಿ ಸ್ವಚ್ಛಗೊಳಿಸಿ, ಅನ್ಯ ಉದ್ಧೇಶಕ್ಕೆ ನೀರು ಬಳಕೆಗೆ ಕ್ರಮ ವಹಿಸಿದ್ದರಿಂದ ಕುಡಿಯುವ ನೀರಿನ ಸಮಸ್ಯೆಯೂ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ವಿಮಾನಯಾನ ಸೇವೆಯಿಂದ ದೇಶ-ವಿದೇಶದಿಂದ ಹೆಚ್ಚಿನ ಪ್ರವಾಸಿಗರು ಆಗಮಿಸಲು ಅನುಕೂಲವಾಗುತ್ತದೆ. ಇಲ್ಲಿ ಬೆಳೆದಿರುವ ಬೆಳೆಗಳಿಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗಲಿದೆ, ಜಿಯೋ ಟ್ಯಾಗ್ ಹೊಂದಿರುವ ಲಿಂಬೆಯೂ ಸೇರಿದಂತೆ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ,ದಾಳಿಂಬೆ ಸೇರಿದಂತೆ ಹಣ್ಣು ಹಂಪಲ ವಿದೇಶಕ್ಕೆ ರಪ್ತು ಮಾಡುವುದರಿಂದ ಆರ್ಥಿಕವಾಗಿ ಸಬಲತೆ ಹೊಂದಲು ಅನುಕೂಲ ಒದಗಿಸಿದೆ ಎಂದು ಅವರು ಹೇಳಿದರು.
ಇಂದಿನ ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ನಮ್ಮಲ್ಲಿರುವ ಸ್ಮಾರಕಗಳ ಕುರಿತಾಗಿ ತಿಳಿದುಕೊಳ್ಳಬೇಕು. ಪ್ರವಾಸೋದ್ಯಮದಿಂದ ಅನೇಕ ಲಾಭಗಳಿದ್ದು ಉದ್ಯೋಗ ಆರ್ಥಿಕತೆ ವೃದ್ದಿಗೆ ಪ್ರವಾಸೋದ್ಯಮ ಬಹುದೊಡ್ಡ ಪ್ರಾತ್ರ ವಹಿಸಲಿದ್ದು, ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಎಲ್ಲರೂ ಕೈ ಜೋಡಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.
ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಅವರು ಮಾತನಾಡಿ, ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಈ ಬಾರಿಯ ಘೋಷವಾಕ್ಯವಾಗಿದೆ ಪಾರಂಪರಿಕ ತಾಣಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಒತ್ತು ನೀಡುವ ಮೂಲಕ
ಅಭಿವೃದ್ದಿಗೊಳಿಸಿ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ನೀಡಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಹೆಚ್ಚೆಚ್ಚು ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ನಮ್ಮ ಪಾರಂಪರಿಕ ತಾಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕುರಿತು ಜಾಗೃತಿ ಮೂಡಿಸುವ ಮೂಲಕ ಪ್ರವಾಸೋದ್ಯಮ ಅಭಿವೃದಿಗೆ ಕೊಡುಗೆ ನೀಡೋಣ ಎಂದು ಅವರು ಹೇಳಿದರು.
ಪೀಟರ್ ಅಲೆಕ್ಸಾಂಡರ್ ಅವರು ಉಪನ್ಯಾಸ ನೀಡಿ, ನಮ್ಮ ಪೂರ್ವಜರು ನಮಗೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರು ನೀಡಿರುವ ಸ್ಮಾರಕಗಳನ್ನು ಸಂರಕ್ಷಣೆ ಮಾಡುವುದು ನಮ್ಮದಾಗಿದೆ. ಜಗತ್ತಿನ ಪ್ರಸಿದ್ಧ ಗೋಳಗುಮ್ಮಟ ನಮ್ಮ ಜಿಲ್ಲೆ ಹೊಂದಿದೆ.ನಮ್ಮ ಜಿಲ್ಲೆ ಜಗತ್ತಿನಲ್ಲಿ ಹೆಸರುವಾಸಿಯಾಗಿದೆ ಇದರಿಂದ ನಮ್ಮ ಜಿಲ್ಲೆಯ ಕೀರ್ತಿ ವಿಶ್ವಮಟ್ಟದಲ್ಲಿದ್ದು, ಅಂತಹ ವಿಶೇಷತೆಯುಳ್ಳ ನಗರದವರಾದ ನಮಗೂ ಹೆಮ್ಮೆಯೂ ಇದೆ. ಪಾರಂಪರಿಕ ತಾಣಗಳ ರಕ್ಷಣೆಗೆ ನಾವೆಲ್ಲ ಒತ್ತು ನೀಡಿ ಎಲ್ಲರಿಗೂ ತಿಳಿಸೋಣ ಎಂದು ಹೇಳಿದರು.
ಪ್ರವಾಸೋದ್ಯಮ ಬೆಳವಣಿಗೆಯಿಂದ ಆರ್ಥಿಕ ಉನ್ನತಿಗೆ ಸಹಕಾರಿಯಾಗಿದೆ.ಯುವಕರು ನಮ್ಮ ಪ್ರವಾಸಿ ತಾಣಗಳ ಕುರಿತು ತಿಳಿದುಕೊಳ್ಳಬೇಕು. ಪ್ರವಾಸಿ ತಾಣಗಳು, ನಮ್ಮ ಸ್ಮಾರಕಗಳು ಮುಕುಟಪ್ರಾಯವಾಗಿವೆ ಎಂದು ಹೇಳಿದ ಅವರು ವಿಜಯಪುರದ ಸ್ಮಾರಕಗಳು ಜಲಮೂಲಗಳ ಕುರಿತು ವಿಸ್ತ್ರತವಾಗಿ ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಅರವಿಂದ ಹೂಗಾರ ಅವರು ಪ್ರಾಸ್ತಾವಿಕ ಮಾತನಾಡಿ, ವಿಶ್ವ ಪ್ರವಾಸೋದ್ಯಮದ ಅಂಗವಾಗಿ ಜಿಲ್ಲೆಯಲ್ಲಿ ಭಾಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ,
ಬಾರಕಮಾನ್ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ,ವಿಶೇಷವಾಗಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಸುಭಾಶ್ಚಂದ್ರ ಕನ್ನೂರ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸ್ನೇಹಾ ಹಾಗೂ ತಂಡದವರು ನಾಡಗೀತೆ ಹಾಡಿದರು. ಶಿವಗಿರಿ ಆವರಣದಲ್ಲಿ ಸಸಿ ನೆಡಲಾಯಿತು.ಕಾರ್ಯಕ್ರಮದ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು ಪ್ರವಾಸೋದ್ಯಮಕ್ಕಾಗಿ ಸಹಕಾರ ಹಾಗೂ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ವಿಶ್ವ ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯು ಹಮ್ಮಿಕೊಂಡ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪ ಮಹಾಪೌರರಾದ ಸುಮಿತ್ರ ಜಾಧವ, ಜಿಲ್ಲಾ ಪಂಚಾಯತಿಯ ಯೋಜನಾ ಮುಖ್ಯ ಯೋಜನಾಧಿಕಾರಿ ಸಿ.ವಿ ಕುಂಬಾರ, ಕೆಕೆಅರ್‍ಟಿಸಿಯ ವಿಭಾಗಾಧಿಕಾರಿ ನಾರಾಯಣಪ್ಪ ಕುರುಬರ, ಎಎಸ್‍ಐ ಅಧಿಕಾರಿ ವಿಜಯಕುಮಾರ, ಕೆಎಸ್‍ಟಿಡಿಸಿಯ ವ್ಯವಸ್ಥಾಪಕರಾದ ಶ್ರೀಮತಿ ಜಗದೇವಿ,ಡಿಟಿಒ ಹುಗ್ಗೇನ್ನವರ, ಶಿವಗಿರಿಯ ವ್ಯವಸ್ಥಾಪಕರಾದ ಶ್ರೀಮತಿ ಆರತಿ ಪಾಟೀಲ, ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಡಾ.ತಮ್ಮಣ್ಣ, ಶಾಂತೇಶ ಕಳಸಗೊಂಡ, ಪ್ರಶಾಂತ ಶೆಟ್ಟಿ, ಅಮೀನ ಹುಲ್ಲೂರ, ಬಿ.ಟಿ,ಜಾಧವ, ಅಡಿವೆಪ್ಪ ಸಾಲಗಲ್, ಎಸ್.ಬಿ.ಪಾಟೀಲ, ಎಸ್.ಬಿ ಬಿರಾದಾರ, ಮಹೇಶ ಕ್ಯಾತನವರ ಸೇರಿದಂತೆ ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande