ಸಾಹಿತ್ಯ ಕ್ಷೇತ್ರಕ್ಕೆ ಹಲಸಂಗಿ ಗೆಳೆಯರ ಬಳಗದ ವಿಶೇಷ ಕೊಡುಗೆ
ವಿಜಯಪುರ, 27 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ, ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ ಹಾಗೂ ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಕನ್ನಡ ಭಾಷೆ ವಿಭಾಗದ ಸಹಯೋಗದಲ್ಲಿ ಬೆಂಗಳೂರಿನ ಜಯನಗರದ 9 ನೇ ಬಡಾವಣೆಯಲ್ಲಿರುವ ಜೆ ಜಿ ಐ ನಾಲೆಡ್ಜ್ ಕ್ಯಾಂಪಸ್ ನಲ್ಲಿ
ಗೆಳೆಯರ


ವಿಜಯಪುರ, 27 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ, ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ ಹಾಗೂ ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಕನ್ನಡ ಭಾಷೆ ವಿಭಾಗದ ಸಹಯೋಗದಲ್ಲಿ ಬೆಂಗಳೂರಿನ ಜಯನಗರದ 9 ನೇ ಬಡಾವಣೆಯಲ್ಲಿರುವ ಜೆ ಜಿ ಐ ನಾಲೆಡ್ಜ್ ಕ್ಯಾಂಪಸ್ ನಲ್ಲಿ ಹಲಸಂಗಿ ಗೆಳಯರ ಬದುಕು ಮತ್ತು ಬರಹ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜರುಗಿತು.

ಈ ಕಾರ್ಯಕ್ರಮವನ್ನು ನಾಡಿನ ಹಿರಿಯ ಸಾಹಿತಿಗಳಾದ ಪ್ರೊ.ಎಸ್ ಜಿ ಸಿದ್ದರಾಮಯ್ಯನವರು ಉದ್ಘಾಟಿಸಿ ಮಾತನಾಡಿ, ಹಲಸಂಗಿ ಗೆಳೆಯರ ಬಳಗವು ಕನ್ನಡ ನವೋದಯ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇಯಾದ ವಿಶೇಷ ಕೊಡುಗೆ ನೀಡಿದ್ದು, ಜನಪದ ಸಾಹಿತ್ಯ ಮತ್ತು ದೇಸಿ ಸಾಹಿತ್ಯದ ಪ್ರಭಾವಕ್ಕೆ ಒಳಗಾದ ಹಲಸಂಗಿ ಗೆಳೆಯರು ಅದರಲ್ಲೇ ಸಾಹಿತ್ಯ ಕೃಷಿ ಮಾಡಿದವರು.ಇನ್ನು ಗೆಳೆಯರ ಬಳಗದ ಅತ್ಯದ್ಭುತ ಕೆಲಸವೆಂದರೇ ಅದು ಜನಪದ ಗೀತೆಗಳ ಸಂಗ್ರಹ. ಅದರಲ್ಲೂ ಗರತಿಯ ಹಾಡುಗಳು ಅದ್ವಿತೀಯ ಸಂಗ್ರಹವಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲೆ, ಸಾಹಿತ್ಯ, ಜಾನಪದ ಹಾಗೂ ರಂಗಭೂಮಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹನೀಯರ ಹೆಸರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಟ್ರಸ್ಟ್ ಗಳನ್ನು ರಚನೆ ಮಾಡಿದೆ, ಆದರೆ ಗೆಳೆಯರ ಬಳಗದ ಹೆಸರಿನಲ್ಲಿರುವ ಸ್ಥಾಪಿಸಿರುವ ಏಕಮಾತ್ರ ಟ್ರಸ್ಟ್ ಹಲಸಂಗಿ ಗೆಳೆಯರ ಪ್ರತಿಷ್ಠಾನವಾಗಿದ್ದು, ಇದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಹಲಸಂಗಿ ಗೆಳೆಯರ ಬಳಗದಲ್ಲಿ ಯಾವುದೇ ಜಾತಿ, ಧರ್ಮದ ಭೇದ ಭಾವಗಳಿರಲಿಲ್ಲ ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ವಿಶೇಷ ಬಳಗವಾಗಿದ್ದು, ಬೇರೆ ಗೆಳೆಯರ ಬಳಗಕ್ಕೆ ದೊರೆತ ಮನ್ನಣೆ ಈ ಬಳಗಕ್ಕೆ ಸಿಗಲಿಲ್ಲ ಎಂಬುದು ವಿμÁದವನ್ನುಂಟು ಮಾಡಿದೆ ಎಂದರು.

ಹಾಗೆಯೇ ಹಲಸಂಗಿ ಗೆಳೆಯರು ಬರೀ ಸಾಹಿತ್ಯ ಕೃಷಿಗೈಯದೇ ಗೆಳೆಯರ ಬಳಗದ ಪಿ ಧೂಲಾ ಸಾಹೇಬರು ಸ್ವಾತಂತ್ರ್ಯ ಸಿಗುವರೆಗೂ ತಮ್ಮ ಕೇಶವನ್ನು ಕತ್ತರಿಸುವುದಿಲ್ಲ ಹಾಗೂ ಕಾಲಲ್ಲಿ ಚಪ್ಪಲಿಯನ್ನು ಹಾಕುವುದಿಲ್ಲ ಎಂಬ ಶಪತದ ದೇಶ ಪ್ರೇಮ ಮೆರೆದ ಘಟನೆಯನ್ನು ನೆನಪಿಸಿದರು. ಹಲಸಂಗಿ ಗೆಳೆಯರ ಬಳಗದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಮಾನವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜೈನ್ ( ಡೀಮ್ಡ್ -ಟು -ಬಿ ಯೂನಿವರ್ಸಿಟಿ)ಯ ಪ್ರಾಧ್ಯಾಪಕರಾದ ಡಾ.ರಾಜಕುಮಾರ ಬಡಿಗೇರ ಉಪನ್ಯಾಸ ನೀಡಿ, ಹಲಸಂಗಿ ಗೆಳೆಯರ ಬಳಗವು ಜಾತ್ಯತೀತ ನಿಲುವಿನ ಹಿನ್ನೆಲೆಯಲ್ಲಿ ಕಟ್ಟಿದ ಗೆಳೆಯರ ಬಳಗವಾಗಿದೆ. ಇದು ಈಗಿನ ವಿಜಯಪುರ ಜಿಲ್ಲೆಯ ಚಡಚಣ ತಾಲೂಕ್ಕಿನ ಹಲಸಂಗಿ ಗ್ರಾಮದಲ್ಲಿ ಮಧುರಚೆನ್ನ ಸಿಂಪಿ ಲಿಂಗಣ್ಣ, ಪಿ.ಧೂಲಾ ಸಾಹೇಬ, ಕಾಪಸೆ ರೇವಪ್ಪ, ಮಾದಣ್ಣ ಓಲೇಕಾರ, ಗುರುಬಸಪ್ಪ ಗಲಗಲಿ, ಚೆನ್ನಬಸಪ್ಪ ಸರಸಂಬಿ, ಆದಮ್ ಸಾಬ್ ಮಸಳಿ, ಶಿವಲಿಂಗಪ್ಪ ಸರಸಂಬಿ ಮೊದಲಾದವರು ಕೂಡಿ ಕಟ್ಟಿದ ಬಳಗವಾಗಿದೆ. ಬಳಗದ ಸದಸ್ಯರು ಹಲಸಂಗಿಯ ನಾನಾ ಸಮುದಾಯದ ತಾಯಂದಿರ ಹಾಗೂ ಜಿಲ್ಲೆಯಾದ್ಯಂತ ಜನಪದ ಹಾಡುಗಳ ಬಲ್ಲ ತಾಯಂದಿರನ್ನು ಸಂಪರ್ಕಿಸಿ ಜನಪದ ಹಾಡುಗಳನ್ನು ಸಂಗ್ರಹಿಸುವ ಅದ್ಭುತ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದರ ಪ್ರತಿಫಲವೇ ಗರತಿಯ ಹಾಡುಗಳು, ಜೀವನ ಸಂಗೀತ ಹಾಗೂ ಮಲ್ಲಿಗೆ ದಂಡೆಯಂತ ಅನಘ್ರ್ಯ ಕೃತಿಗಳು ಹೊರ ಹೊಮ್ಮಿದವು. ಅಲ್ಲದೇ ನನ್ನನಲ್ಲ ದಂತ ಅನಭಾವ ಸಾಹಿತ್ಯ ಕೃತಿಯನ್ನು ನೀಡಿ ನವೋದಯದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುಭಾವ ಸಾಹಿತ್ಯ ರಚನೆಗೆ ಕಾರಣಿಭೂತರಾದರು, ಸಾಹಿತ್ಯ ಸಿರಿಯನ್ನು ಹೆಚ್ಚಿಸಿದರು. ನಾಡ ಕಟ್ಟುವಲ್ಲಿ ಅವಿರತವಾಗಿ ದುಡಿದ ಮಹನೀಯರು ನಾದ ಹಬ್ಬ ಹಂಪಿ ಉತ್ಸವ ಮೊದಲಾದವುಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಕನ್ನಡ ಭಾಷೆ ,ಸಂಸ್ಕೃತಿಗೆ ದ್ವನಿಯಾದರು. ಪ್ರಸ್ತುತದಲ್ಲಿ ಪ್ರತಿಷ್ಠಾನವು ಗೆಳೆಯರ ಬಳಗದ ಹೆಸರಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಗುರುತರ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾಷೆ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ ಕೆ ಶ್ರೀಧರ್ ಮಾತನಾಡಿ, ಹಲಸಂಗಿ ಗೆಳೆಯರ ಸಾಹಿತ್ಯ ವಿಜಯಪುರ ಜಿಲ್ಲೆಗೆ ಮಾತ್ರ ಸೀಮಿತವಾಗಿರಿಸದೆ ಎಲ್ಲರೂ ಅವರ ಸಾಹಿತ್ಯವನ್ನು ಅಧ್ಯಯನ ಮಾಡಬೇಕು, ಪ್ರತಿಷ್ಠಾನದ ಇಂತಹ ಕಾರ್ಯಕ್ರಮವನ್ನು ನಮ್ಮ ಜೈನ್ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವುದು ಹರ್ಷವನ್ನುಂಟು ಮಾಡಿದೆ ಹಾಗಾಗಿ ಇಲಾಖೆಗೆ ಹಾಗೂ ಪ್ರತಿಷ್ಠಾನಕ್ಕೆ ನನ್ನ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ ಅತಿಥಿಗಳನ್ನು ಸ್ವಾಗತಿಸಿ, ಪ್ರತಿಷ್ಠಾನದ ಕಿರು ಪರಿಚಯವನ್ನು ನೀಡಿದರು. ಪ್ರತಿಷ್ಠಾನದ ಸದಸ್ಯರಾದ ಶ್ರೀಮತಿ ದಾಕ್ಷಾಯಣಿ ಬಿರಾದಾರ ಪ್ರಾಸ್ತವಿಕವಾಗಿ ಮಾತನಾಡಿದರು.

ಕನ್ನಡ ಭಾಷೆ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರಾಜೇಶ್ವರಿ ವೈ ಎಂ,ಮಧುರ ಚೆನ್ನರ ಮೊಮ್ಮಕ್ಕಳಾದ ಜಯಶ್ರೀ ಗಲಗಲಿ, ಸತ್ಯವತಿ ಗಲಗಲಿ ಹಾಗೂ ಸಿಂಪಿ ಲಿಂಗಣ್ಣನವರ ಮೊಮ್ಮಕ್ಕಳಾದ ಸ್ನೇಹಲತಾ, ಮರಿ ಮೊಮ್ಮಗಳಾದ ರೋಹಿಣಿ ,ಕೆ ಎಸ್ ನರಸಿಂಹಸ್ವಾಮಿಯವರ ಮೊಮ್ಮಗಳಾದ ಡಾ.ಮೆಖಲಾ ವೆಂಕಟೇಶ್ ಮತ್ತು ಕುಟುಂಬದವರು ಹಾಗೂ ವಿಶ್ವವಿದ್ಯಾಲಯದ ನಾನಾ ವಿಭಾಗದ ಪ್ರಾಧ್ಯಾಪಕರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅಂತಾರಾಷ್ಟ್ರೀಯ ಖ್ಯಾತಿಯ ಲಕ್ಷ್ಮಣ ನೆಲಸೊಗಡು ಕಲಾ ತಂಡದವರು ಜನಪದ ಗಾಯನ ಕಾರ್ಯಕ್ರಮ ನೆರವೇರಿಸಿ ಕೊಟ್ಟರು.ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾದ ತ್ರಿಷಾ ಹಾಗೂ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande