ಪದ್ಮಭೂಷಣ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿ ಎಸ್.ಎಲ್. ಭೈರಪ್ಪ ನಿಧನ
ಬೆಂಗಳೂರು, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸರಸ್ವತಿ ಸಮ್ಮಾನ್‌ ಪುರಸ್ಕೃತ, ಪದ್ಮಭೂಷಣ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ವಿಧಿವಶರಾದರು. ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪನವರು
Slb


ಬೆಂಗಳೂರು, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸರಸ್ವತಿ ಸಮ್ಮಾನ್‌ ಪುರಸ್ಕೃತ, ಪದ್ಮಭೂಷಣ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ವಿಧಿವಶರಾದರು.

ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪನವರು ಮೈಸೂರು ಬಿಟ್ಟು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1931ರ ಆಗಸ್ಟ್‌ 20ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರದಲ್ಲಿ ಜನಿಸಿದ ಅವರು, ಮೈಸೂರಿನಲ್ಲಿ ಪ್ರೌಢ ಮತ್ತು ಪದವಿ ಶಿಕ್ಷಣ ಮುಗಿಸಿ, ಎಂ.ಎ. ಪದವಿಯಲ್ಲಿ ಸುವರ್ಣಪದಕ ಗಳಿಸಿದ್ದರು. ಬಳಿಕ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ” ಎಂಬ ಇಂಗ್ಲಿಷ್ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು.

ಭೈರಪ್ಪನವರ ಸಾಹಿತ್ಯ ಸೃಜನಶೀಲತೆ ಕನ್ನಡದ ಗಡಿಯನ್ನು ಮೀರಿ ಭಾರತದೆಲ್ಲೆಡೆ ಖ್ಯಾತಿ ಪಡೆದಿದೆ. ಅವರ ಪ್ರಮುಖ ಕಾದಂಬರಿಗಳು ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಸೇರಿದಂತೆ 24 ಕಾದಂಬರಿಗಳನ್ನು ಒಳಗೊಂಡಿವೆ. ಇವುಗಳಲ್ಲಿ ಅನೇಕ ಕೃತಿಗಳು ಹಿಂದಿ, ಮರಾಠಿ, ಇಂಗ್ಲಿಷ್ ಸೇರಿ ಹದಿನಾಲ್ಕು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ.

ಮೂರು ದಶಕಗಳ ಕಾಲ ಎನ್‌ಸಿಇಆರ್‌ಟಿಯಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಭೈರಪ್ಪನವರು, ಸಾಹಿತ್ಯ ವಿಮರ್ಶೆ, ಸೌಂದರ್ಯಮೀಮಾಂಸೆ ಮತ್ತು ಸಂಸ್ಕೃತಿಯ ಕುರಿತಾದ ಐದು ಕೃತಿಗಳನ್ನು ಹೊರತಂದಿದ್ದರು. ಅವರ ಸಾಹಿತ್ಯದ ಕುರಿತು ಅನೇಕ ಸಂಶೋಧನಾ ಪ್ರಬಂಧಗಳು ರಚನೆಯಾಗಿವೆ.

ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತ, ಚಿತ್ರ-ಶಿಲ್ಪಕಲೆಯಲ್ಲೂ ಆಸಕ್ತಿ ಹೊಂದಿದ್ದ ಭೈರಪ್ಪ ಜಗತ್ತಿನ ಏಳು ಭೂಖಂಡಗಳನ್ನೂ ಪ್ರವಾಸ ಮಾಡಿ ಜೀವನವನ್ನು ಸಮೃದ್ಧಗೊಳಿಸಿದ್ದರು.

ಕನ್ನಡ ಸಾಹಿತ್ಯ ಲೋಕದಲ್ಲಿ ಅಳಿಸಿಹಾಕಲಾರದ ಗುರುತು ಮೂಡಿಸಿದ ಭೈರಪ್ಪನವರ ನಿಧನಕ್ಕೆ ದೇಶದ ಸಾಂಸ್ಕೃತಿಕ ವಲಯ ದುಃಖ ವ್ಯಕ್ತಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande