ಮೈಸೂರು, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿ ಬೆಟ್ಟದಲ್ಲಿ ವೇದಿಕೆ ಸಿದ್ಧವಾಗಿದೆ.
ಬೆಳಗ್ಗೆ 10:10 ರಿಂದ 10:40ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ವೇದಿಕೆಯಲ್ಲಿ ಬೆಳ್ಳಿಯ ರಥದಲ್ಲಿ ಇರುವ ಚಾಮುಂಡೇಶ್ವರಿಗೆ ಗಣ್ಯರಿಂದ ಪುಷ್ಪಾರ್ಚನೆ ನೆರವೇರಲಿದೆ. ಈ ಮೂಲಕ ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ.
11 ದಿನಗಳ ನಾಡಹಬ್ಬ ದಸರಾ ಮಹೋತ್ಸವವನ್ನು ಸಾಹಿತಿ ಹಾಗೂ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್, ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್, ಹೆಚ್. ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಶಾಸಕ ಜಿ. ಟಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ ಮುಗಿಯುವವರೆಗೂ ಭಕ್ತರಿಗೆ ಚಾಮುಂಡಿ ತಾಯಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಖಾಸಗಿ ವಾಹನಗಳಿಗೂ ನಿರ್ಬಂಧವಿದ್ದು, ಚಾಮುಂಡಿಬೆಟ್ಟದ ಕೆಳಭಾಗದಲ್ಲೇ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಮುಂಡಿಬೆಟ್ಟದ ಮೇಲೆ ಅತಿ ಹೆಚ್ಚು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಇಂದಿನಿಂದ ಅ.2ರ ವರೆಗೆ ದಸರಾ ಮಹೋತ್ಸವ ನಡೆಯಲಿದ್ದು ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಎರಡು ಹಂತದ ಭದ್ರತೆ ನಿಯೋಜನೆ ಮಾಡಿದೆ.
ದಸರಾ ಉದ್ಘಾಟಕರ ವಿಚಾರದಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ದಸರಾ ಉದ್ಘಾಟನೆಯನ್ನು ಪರಿಗಣಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದೆ.
ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ದಸರಾ ಉದ್ಘಾಟನೆಯ ಭದ್ರತೆಯ ನೇತೃತ್ವ ವಹಿಸಿದ್ದು, ದಸರಾಗೆ 6,000 ಪೊಲೀಸರ ಕಣ್ಗಾವಲು ಹಾಗೂ ಮೈಸೂರು ನಗರದಲ್ಲಿ 30,000ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದೆ.
ಚಾಮುಂಡಿ ಬೆಟ್ಟದಲ್ಲಿ ನಿರ್ಮಾಣವಾಗಿರುವ ಉದ್ಘಾಟನಾ ವೇದಿಕೆಗೆ ನಾಡ ಅಧಿದೇವತೆಯ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಿ ವೇದಿಕೆಯಲ್ಲಿರುವ ಬೆಳ್ಳಿಯ ರಥಕ್ಕೆ ತಂದು ಕೂರಿಸಲಾಗುತ್ತದೆ. ಬಳಿಕ ಬೆಳಗ್ಗೆ 10:10 ರಿಂದ 10:40ರ ಶುಭ ವೃಶ್ಚಿಕ ಲಗ್ನದಲ್ಲಿ ಗಣ್ಯರಿಂದ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ.
ನಂತರ ಗಣ್ಯರ ಮಾತು ಹಾಗೂ ಉದ್ಘಾಟಕರ ಬಾಷಣ, ಬಳಿಕ ಅಧ್ಯಕ್ಷರು ಮಾತನಾಡಲಿದ್ದಾರೆ. ನಂತರ ಮೈಸೂರು ನಗರದಲ್ಲಿ ದಸರಾ ಕಾರ್ಯಕ್ರಮಗಳು ಉದ್ಘಾಟನೆಯಾಗಲಿವೆ. ಈ ಮಧ್ಯೆ ಬಾನು ಮುಷ್ತಾಕ್ ಅವರ ಬದುಕು-ಬರಹ ಪುಸ್ತಕ ಬಿಡುಗಡೆಯಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa