ವಾಷಿಂಗ್ಟನ್, 21 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಫ್ಘಾನಿಸ್ತಾನದ ಬಾಗ್ರಾಮ್ ವಾಯುನೆಲೆಯನ್ನು ಮರಳಿ ಪಡೆಯುವ ಪ್ರಶ್ನೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ತಾಲಿಬಾನ್ ಆಡಳಿತ ಈ ನೆಲೆಯನ್ನು ಅಮೆರಿಕಕ್ಕೆ ಹಿಂತಿರುಗಿಸದಿದ್ದರೆ ಪರಿಣಾಮಗಳು ತುಂಬಾ ಕೆಟ್ಟದಾಗಿರುತ್ತವೆ ಎಂದು ಅವರು ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದಾರೆ.
ಇತ್ತೀಚೆಗೆ ಬ್ರಿಟನ್ ಭೇಟಿಯ ಸಂದರ್ಭ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆಗಿನ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್, ಬಾಗ್ರಾಮ್ ವಾಯುನೆಲೆ ಅಮೆರಿಕಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವೆಂದು ಹೇಳಿದರು.
ಈ ನೆಲೆಯು ಚೀನಾದ ಪರಮಾಣು ಶಸ್ತ್ರಾಸ್ತ್ರ ಉತ್ಪಾದನಾ ಕೇಂದ್ರದಿಂದ ಕೇವಲ ಒಂದು ಗಂಟೆಯ ದೂರದಲ್ಲಿದೆ ಎಂಬುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.
ಬಾಗ್ರಾಮ್ ವಾಯುನೆಲೆಯು ಇಪ್ಪತ್ತು ವರ್ಷಗಳ ಕಾಲ ಅಮೆರಿಕದ ಅತಿದೊಡ್ಡ ಮಿಲಿಟರಿ ನೆಲೆಯಾಗಿ ಬಳಸಲ್ಪಟ್ಟಿತ್ತು. ಆದರೆ 2021ರಲ್ಲಿ ಬೈಡೆನ್ ಆಡಳಿತವು ಅಫ್ಘಾನಿಸ್ತಾನದಿಂದ ಯುಎಸ್ ಪಡೆಗಳನ್ನು ತುರ್ತು ಹಾಗೂ ಅಸ್ತವ್ಯಸ್ತವಾಗಿ ಹಿಂತೆಗೆದುಕೊಂಡ ನಂತರ, ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಿತ್ತು. ಈ ಹಿಂತೆಗೆತ ಸಮಯದಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 13 ಅಮೆರಿಕ ಸೈನಿಕರು ಸೇರಿ 170 ಮಂದಿ ಸಾವಿಗೀಡಾದರು.
ಬೈಡೆನ್ ಆಡಳಿತದ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ ಟ್ರಂಪ್, ಅಮೆರಿಕ ಸೇನೆಯನ್ನು ನಾನೂ ಹಿಂತೆಗೆದುಕೊಳ್ಳುತ್ತಿದ್ದೆ, ಆದರೆ ಅದು ಶಕ್ತಿ ಮತ್ತು ಘನತೆಯಿಂದ ಆಗುತ್ತಿತ್ತು. ಬಾಗ್ರಾಮ್ ನೆಲೆಯನ್ನು ತಾಲಿಬಾನ್‌ಗೆ ಉಚಿತವಾಗಿ ಬಿಟ್ಟುಕೊಡುವುದು ಒಂದು ದೊಡ್ಡ ತಪ್ಪು ಎಂದಿದ್ದಾರೆ. ಅಮೆರಿಕದ ಈ ಹಿಂದೇಟು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಉಕ್ರೇನ್ ಮೇಲೆ ದಾಳಿ ಮಾಡಲು ಧೈರ್ಯಮಾಡಿತು ಎಂದೂ ಅವರು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa