ಗದಗ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ ನಗರದಲ್ಲಿ ಮತ್ತೆ ಬಡ್ಡಿ ದಂಧೆಕೋರರ ಅಟ್ಟಹಾಸ ಬೆಳಕಿಗೆ ಬಂದಿದೆ. ಹಮಾಲರ್ ಪ್ಲಾಟ್ ನಿವಾಸಿ ಪ್ರೇಮ್ ಖೋಡೆ ಎಂಬ ಯುವಕನು ಬಡ್ಡಿ ಹಣ ಕಟ್ಟಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ, ಇರಾನಿ ಕಾಲೋನಿಯ ಹರ್ಷವರ್ಧನ್ ಎನ್ನುವ ಬಡ್ಡಿ ದಂಧೆಕೋರನು ತನ್ನ ಗುಂಪಿನೊಂದಿಗೆ ಹಾಡುಹಗಲೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮೂಲತಃ 40 ಸಾವಿರ ರೂಪಾಯಿ ಪಡೆದಿದ್ದ ಪ್ರೇಮ್, ಪ್ರತಿವಾರ 4 ಸಾವಿರ ರೂಪಾಯಿ ಕಟ್ಟುತ್ತಿದ್ದ. ಆದರೆ ಇತ್ತೀಚೆಗೆ ಹಣಕಾಸಿನ ಸಮಸ್ಯೆಯಿಂದ ಒಂದು ವಾರ ಹಣ ಕಟ್ಟಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹರ್ಷವರ್ಧನ್ ಹಾಗೂ ಸಹಚರರು ಪ್ರೇಮ್‌ನ್ನು ಹುಡುಕಿಕೊಂಡು ಬಂದು, ಕ್ರೂರವಾಗಿ ಹಲ್ಲೆ ನಡೆಸಿ, ಬಲವಂತವಾಗಿ ರೂಂಗೆ ಎಳೆದೊಯ್ದು ಥಳಿಸಿದ್ದಾರೆ. ಗಾಯಗೊಂಡ ಪ್ರೇಮ್, ಅಲ್ಲಿಂದ ಪಾರಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಡ್ಡಿ ದಂಧೆಕೋರರ ಅಟ್ಟಹಾಸ ಮತ್ತೊಮ್ಮೆ ಬಹಿರಂಗವಾಗಿದೆ. ಈ ಹಿಂದೆ ಸಹ ಇದೇ ವಿಚಾರವಾಗಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರ ನಿರ್ಲಕ್ಷ್ಯದಿಂದ ಬಡ್ಡಿ ದಂಧೆಕೋರರ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಾದ ಪ್ರೇಮ್ ಹಾಗೂ ಅವರ ತಂದೆ ಗಣೇಶ ಆರೋಪ ಮಾಡಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಬಾಧಿತ ಯುವಕನ ತಂದೆ ಗಣೇಶ ಖೋಡೆ ನ್ಯಾಯ ಕೋರಿ ಮನವಿ ಮಾಡಿದ್ದಾರೆ. ಇತ್ತಿಚೆಗೆ ಜಿಲ್ಲಾಧಿಕಾರಿ ಹಾಗೂ ಉನ್ನತಾಧಿಕಾರಿಗಳು ಮೈಕ್ರೋಫೈನಾನ್ಸ್ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಅಕ್ರಮ ಬಡ್ಡಿ ದಂಧೆಕೋರರು ನಿರ್ಭಯವಾಗಿ ಕೃತ್ಯ ಮುಂದುವರೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ವಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP