ವಾಷಿಂಗ್ಟನ್, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವೆನೆಜುವೆಲಾದ ಡ್ರಗ್ ಕಾರ್ಟೆಲ್ ವಿರುದ್ಧ ಅಮೆರಿಕ ತನ್ನ ಕಠಿಣ ಅಭಿಯಾನವನ್ನು ಮುಂದುವರಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಘೋಷಿಸಿದ್ದಾರೆ.
ಈ ತಿಂಗಳಲ್ಲಿ ಎರಡನೇ ಬಾರಿಗೆ ಯುಎಸ್ ಪಡೆಗಳು ದೋಣಿಯ ಮೇಲೆ ದಾಳಿ ನಡೆಸಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ.
ಟ್ರಂಪ್ ನೀಡಿರುವ ಮಾಹಿತಿ ಪ್ರಕಾರ, ದಾಳಿ ಅಂತಾರಾಷ್ಟ್ರೀಯ ಸಮುದ್ರ ನೀರಿನಲ್ಲಿ ನಡೆದಿದ್ದು, ದೋಣಿ ಅಮೆರಿಕದ ಕಡೆಗೆ ಬರುತ್ತಿತ್ತು. ಕೊಲ್ಲಲ್ಪಟ್ಟವರ ಗುರುತು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು 27 ಸೆಕೆಂಡುಗಳ ವೀಡಿಯೋವನ್ನು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸ್ಪೀಡ್ ಬೋಟ್ ಮೇಲೆ ನಡೆದ ಸ್ಫೋಟ ದೃಶ್ಯಗಳಿವೆ.
ಪೆಂಟಗನ್ ಅಧಿಕೃತ ಮಾಹಿತಿ ನೀಡಲು ನಿರಾಕರಿಸಿದರೆ, ಅಧಿಕಾರಿಯೊಬ್ಬರು ಇದು ವಿಶೇಷ ಕಾರ್ಯಾಚರಣೆ ಎಂದು ಮಾತ್ರ ಹೇಳಿದ್ದಾರೆ. ಸೆಪ್ಟೆಂಬರ್ 2 ರಂದು ನಡೆದ ದಾಳಿಯನ್ನು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ “ಘೋರ ಅಪರಾಧ” ಎಂದು ಖಂಡಿಸಿದ್ದರು. “ಅವರು ನಿಜವಾಗಿಯೂ ಕಳ್ಳಸಾಗಣೆದಾರರೆಂದು ಭಾವಿಸಿದ್ದರೆ, ಬಂಧಿಸಬೇಕಾಗಿತ್ತು, ಕೊಲ್ಲುವುದು ಸರಿಯಲ್ಲ” ಎಂದು ಮಡುರೊ ವಾಗ್ದಾಳಿ ನಡೆಸಿದ್ದರು.
ಇದರ ಭಾಗವಾಗಿ, ಅಮೆರಿಕವು ಕರೀಬಿಯನ್‌ನಲ್ಲಿ 8 ಯುದ್ಧ ನೌಕೆಗಳನ್ನು ನಿಯೋಜಿಸಿದ್ದು, ಪೋರ್ಟೊ ರಿಕೊಗೆ MQ-9 ರೀಪರ್ ಡ್ರೋನ್‌ಗಳು, F-35 ಯುದ್ಧ ವಿಮಾನಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ. ಇತ್ತೀಚೆಗೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್ ಡಾನ್ ಕೇನ್ ಪೋರ್ಟೊ ರಿಕೊಗೆ ಅಘೋಷಿತ ಭೇಟಿಯನ್ನೂ ನೀಡಿದ್ದರು.
ಆದರೆ, ಈ ಕ್ರಮವನ್ನು ಅಮೆರಿಕ ಕಾಂಗ್ರೆಸ್ಸಿನ ಡೆಮೋಕ್ರಾಟ್ ನಾಯಕರು ಟೀಕಿಸಿದ್ದಾರೆ.
ಸಶಸ್ತ್ರ ಸೇವೆಗಳ ಸಮಿತಿಯ ಹಿರಿಯ ಡೆಮೋಕ್ರಾಟ್ ಸೆನೆಟರ್ ಜ್ಯಾಕ್ ರೀಡ್, “ಟ್ರಂಪ್ ಅವರ ಕ್ರಮವು ಕಾನೂನಿನ ಉಲ್ಲಂಘನೆ, ಸಂವಿಧಾನದ ಮೇಲೆ ಅಪಾಯಕಾರಿ ದಾಳಿ” ಎಂದು ಹೇಳಿದ್ದಾರೆ.
“ಯಾವುದೇ ಅಧ್ಯಕ್ಷರು ರಹಸ್ಯವಾಗಿ ಯುದ್ಧ ಮಾಡಲು ಅಥವಾ ಅನ್ಯಾಯದ ಕೊಲೆಗಳನ್ನು ಮಾಡಲು ಸಾಧ್ಯವಿಲ್ಲ – ಇದು ಪ್ರಜಾಪ್ರಭುತ್ವವಲ್ಲ, ಸರ್ವಾಧಿಕಾರತ್ವ” ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa