
ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರ ಎರಡನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಆಯೋಜಿಸಿರುವ ಈ ಎರಡು ದಿನಗಳ ಸಮ್ಮೇಳನದಲ್ಲಿ ಶಾ ಅವರು ಆನ್‌ಲೈನ್ ಮಾದಕ ವಸ್ತು ನಾಶ ಅಭಿಯಾನ ಪ್ರಾರಂಭಿಸಿ, ಎನ್‌ಸಿಬಿ ವಾರ್ಷಿಕ ವರದಿ–2024 ಬಿಡುಗಡೆ ಮಾಡುವರು. ದೇಶದ 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಎಎನ್‌ಟಿಎಫ್ ಮುಖ್ಯಸ್ಥರು ಮತ್ತು ನಾನಾ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ವರ್ಷದ ಸಮ್ಮೇಳನದ ವಿಷಯ “ಜಂಟಿ ಸಂಕಲ್ಪ, ಹಂಚಿಕೆಯ ಜವಾಬ್ದಾರಿ”. ಪ್ರಧಾನಿ ನರೇಂದ್ರ ಮೋದಿಯವರ ಮಾದಕವಸ್ತು ಮುಕ್ತ ಭಾರತ ದೃಷ್ಟಿಯನ್ನು ಬಲಪಡಿಸಲು ಸ್ಪಷ್ಟ ಮಾರ್ಗಸೂಚಿ ಸಿದ್ಧಪಡಿಸುವುದು ಮುಖ್ಯ ಗುರಿಯಾಗಿದೆ.
ಸಭೆಯಲ್ಲಿ ಪೂರೈಕೆ ನಿಯಂತ್ರಣ, ಬೇಡಿಕೆ ಕಡಿತ, ಹಾನಿ ತಡೆ, ಅಕ್ರಮ ಪ್ರಯೋಗಾಲಯಗಳ ವಿರುದ್ಧ ಕ್ರಮ, ಪರಾರಿಗಳ ಮೇಲ್ವಿಚಾರಣೆ, ವಿದೇಶಿ ಅಪರಾಧಿಗಳ ನಿರ್ವಹಣೆ ಹಾಗೂ ಡಾರ್ಕ್ ವೆಬ್–ಕ್ರಿಪ್ಟೋ ಮೂಲಕ ನಡೆಯುವ ಕಳ್ಳಸಾಗಣೆ ಸೇರಿದಂತೆ ಪ್ರಮುಖ ಅಂಶಗಳನ್ನು ಚರ್ಚಿಸಲಾಗುವುದು.
ಒಟ್ಟು ಆರು ತಾಂತ್ರಿಕ ಅಧಿವೇಶನಗಳು ನಡೆಯಲಿದ್ದು, 2047ರ ವೇಳೆಗೆ ಮಾದಕ ದ್ರವ್ಯ ಮುಕ್ತ ಭಾರತ ಗುರಿಯನ್ನು ಸಾಧಿಸುವ ತಂತ್ರಗಳು ಹಾಗೂ ತನಿಖಾ ವಿಧಾನಗಳ ಸುಧಾರಣೆಗಳ ಕುರಿತೂ ಚರ್ಚಿಸಲಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa