ಕೋಲ್ಕತ್ತಾ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೋಲ್ಕತ್ತಾದ ವಿಜಯದುರ್ಗ್‌ನಲ್ಲಿ ಭಾರತೀಯ ಸೇನೆಯ ಪೂರ್ವ ಕಮಾಂಡ್ ಪ್ರಧಾನ ಕಚೇರಿಯಲ್ಲಿ ಆರಂಭವಾದ ಮೂರು ದಿನಗಳ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಆಪರೇಷನ್ ಸಿಂಧೂರ್ನಲ್ಲಿ ಸೈನ್ಯದ ಶೌರ್ಯವನ್ನು ಶ್ಲಾಘಿಸಿ, ಸಶಸ್ತ್ರ ಪಡೆಗಳ ಪಾತ್ರವು ಕೇವಲ ಭದ್ರತೆಗೆ ಮಾತ್ರ ಸೀಮಿತವಾಗಿಲ್ಲ, ರಾಷ್ಟ್ರ ನಿರ್ಮಾಣದಲ್ಲಿಯೂ ಮಹತ್ವದಾಗಿದೆ ಎಂದು ಹೇಳಿದರು.
ಸುಧಾರಣೆ, ಪರಿವರ್ತನೆ ಮತ್ತು ಭವಿಷ್ಯಕ್ಕಾಗಿ ಸಿದ್ಧತೆ ನಮ್ಮ ಕಾರ್ಯತಂತ್ರವಾಗಿರಬೇಕು. ನವೀನ ತಂತ್ರಜ್ಞಾನ, ಸೈಬರ್ ಹಾಗೂ ಬಾಹ್ಯಾಕಾಶ ಭದ್ರತೆ ಕ್ಷೇತ್ರಗಳಲ್ಲಿ ಪಡೆಗಳನ್ನು ತ್ವರಿತವಾಗಿ ಬಲಪಡಿಸುವುದು ಅಗತ್ಯ ಎಂದರು.
ಈ ಸಂದರ್ಭದಲ್ಲಿ ಪ್ರಧಾನಿ ‘ಭಾರತೀಯ ಸಶಸ್ತ್ರ ಪಡೆಗಳ ವಿಷನ್ 2047’ ದಾಖಲೆಯನ್ನು ಅನಾವರಣಗೊಳಿಸಿದರು. ಭವಿಷ್ಯದ ಸವಾಲುಗಳಿಗೆ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸಲು ಮಾರ್ಗಸೂಚಿ ನೀಡುವ ಈ ದಾಖಲೆಯನ್ನು ಸಮ್ಮೇಳನದ ಪ್ರಮುಖ ಘಟ್ಟವೆಂದು ಪರಿಗಣಿಸಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್‌ಎಸ್‌ಎ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹಾಗೂ ಮೂರು ಪಡೆಗಳ ಮುಖ್ಯಸ್ಥರು ಸಮ್ಮೇಳನದಲ್ಲಿ ಹಾಜರಿದ್ದರು. ರಕ್ಷಣಾ ಸಚಿವಾಲಯದ ಪ್ರಕಾರ, ಪಡೆಗಳ ಆಧುನೀಕರಣ, ಜಂಟಿ ಕಾರ್ಯಾಚರಣೆಗಳು, ಏಕೀಕರಣ ಮತ್ತು ಬಹು-ಡೊಮೇನ್ ಯುದ್ಧ ಸಾಮರ್ಥ್ಯ ವೃದ್ಧಿ ಮುಂತಾದ ವಿಷಯಗಳನ್ನು ಚರ್ಚಿಸಲಾಗುತ್ತಿದೆ.
ಗಡಿಯಾಚೆಗಿನ ಭಯೋತ್ಪಾದನಾ ಮೂಲಸೌಕರ್ಯವನ್ನು ನಾಶಮಾಡಿದ ಆಪರೇಷನ್ ಸಿಂಧೂರ್ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಜಂಟಿ ಕಾರ್ಯಚರಣೆಯ ವೃತ್ತಿಪರತೆ ಮತ್ತು ನಿಖರತೆಯ ಉತ್ತಮ ಉದಾಹರಣೆಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಉನ್ನತ ಮಟ್ಟದ ಸಮ್ಮೇಳನದ ಈ ವರ್ಷದ ವಿಷಯವನ್ನು ‘ಸುಧಾರಣೆಗಳ ವರ್ಷ – ಭವಿಷ್ಯಕ್ಕಾಗಿ ಪರಿವರ್ತನೆ’ ಎಂದು ನಿಗದಿಪಡಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa