ಗದಗ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದ ಹಿಂದೂ ಮಹಾ ಗಣೇಶ್ ಧರ್ಮಸಭೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಉಗ್ರ ಹಾಗೂ ಭಾವನಾತ್ಮಕ ಭಾಷಣ ಮಾಡಿ ಹಿಂದೂ ಸಮಾಜವನ್ನು ಒಂದಾಗಲು ಕರೆ ನೀಡಿದರು.
ಭಾಷಣದ ಆರಂಭದಲ್ಲೇ ಅವರು ದೇಶದೊಳಗೆ ಬೇರೆ ಬೇರೆ ಘೋಷಣೆಗಳ ಮೂಲಕ ಭಾರತವನ್ನು ಅಶಾಂತಗೊಳಿಸಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. “ಲಡ್ಕಿಲಿಂಗೆ ಯುದ್ಧ ಮಾಡಿ ಹಿಂದೂಸ್ತಾನ್ ಗೆಲ್ಲೊಕಾಗಲ್ಲ ಅಂತ ಗೊತ್ತಾಗಿದೆ, ಈಗ ಗುಸ್ಕಿಲಿಂಗೆ ಹಿಂದೂಸ್ತಾನ್ ಅಂತ ಶುರುವಾಗಿದೆ” ಎಂದು ಹೇಳಿದರು.
ಮುತಾಲಿಕ್ ಅವರು, ದೇಶವನ್ನು ಇಸ್ಲಾಂ, ಕ್ರಿಶ್ಚಿಯನ್ ಹಾಗೂ ಕಮ್ಯೂನಿಸ್ಟ್ ವಲಯಗಳಿಗೆ ತಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಚ್ಚರಿಕೆ ನೀಡಿದರು. “ಗಣೇಶ ಉತ್ಸವಗಳನ್ನು ಅಡಚಣೆ ಮಾಡುವ ಮೂಲಕ ಹಿಂದೂ ಸಮಾಜವನ್ನು ಕುಗ್ಗಿಸಲು ನೋಡುತ್ತಿದ್ದಾರೆ. ಮದ್ದೂರು, ನಾಗಮಂಗಲ ಸೇರಿದಂತೆ ಅನೇಕ ಕಡೆ ಗಣೇಶ ಮೆರವಣಿಗೆ ವೇಳೆ ಕಲ್ಲೆಸೆದ ಘಟನೆಗಳು ನಡೆದಿವೆ. ನಮ್ಮ ದೇಶದ ಅನ್ನ ತಿಂದು, ಹಬ್ಬಗಳ ಮೇಲೆ ಕಲ್ಲು ಎಸೆಯುವುದು ಎಷ್ಟು ಸೊಕ್ಕು?” ಎಂದು ಪ್ರಶ್ನಿಸಿದರು.
ಅವರು ಶಾಂತಿ ಮತ್ತು ಸಹನೆ ಸಾಕಾಗಿದೆ ಎಂದು ಸ್ಪಷ್ಟಪಡಿಸಿ, “ಇನ್ನು ಮುಂದೆ ಮನವಿ, ಬಂದ್, ಧರಣಿ ಇಲ್ಲ. ಹಿಂದೂ ಹಬ್ಬ, ಮೆರವಣಿಗೆ, ದೇವಸ್ಥಾನಗಳ ಮೇಲೆ ಕಲ್ಲು ಎಸೆದ್ರೆ, ಹಿಂದೂ ಹುಡುಗಿಯರ ಮೇಲೆ ದಾಳಿ ಮಾಡಿದ್ರೆ ಸರಿಯಾದ ಉತ್ತರ ಕೊಡೋ ಕಾಲ ಬಂದಿದೆ” ಎಂದು ಘೋಷಿಸಿದರು.
ದೇಶದ್ರೋಹಿಗಳಿಗೆ ಗಟ್ಟಿಯಾಗಿ ಎಚ್ಚರಿಕೆ ನೀಡಿದ ಮುತಾಲಿಕ್, “ನಮ್ಮ ದೇಶದಲ್ಲಿ ಹುಟ್ಟಿ, ನಮ್ಮ ಅನ್ನ ತಿಂದು, ಪಾಕಿಸ್ತಾನ್ ಜಿಂದಾಬಾದ್ ಕೂಗುವ ಕಿಡಿಗೇಡಿಗಳಿಗೆ ಟಿಕೆಟ್ ಕೊಟ್ಟು ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ. ಪಾಕಿಸ್ತಾನ ಭಿಕಾರಿಯಾಗಿದೆ, ಆದರೆ ಇಲ್ಲಿ ಎಲ್ಲ ಸೌಲಭ್ಯಗಳನ್ನು ಪಡೆದು ದ್ರೋಹ ಮಾಡುವವರ ವಿರುದ್ಧ ಹೋರಾಟ ನಮ್ಮದು” ಎಂದು ಚಾಟಿ ಬೀಸಿದರು.
ಹಿಂದೂ ಸಮಾಜ ಸ್ವದೇಶಿ ವಸ್ತುಗಳನ್ನು ಬಳಸಬೇಕು, ಪಾಕಿಸ್ತಾನ ಪರ ಘೋಷಣೆ ಮಾಡುವವರಿಂದ ವ್ಯಾಪಾರ–ವಹಿವಾಟು ನಿಲ್ಲಿಸಬೇಕು ಎಂದು ಕರೆ ನೀಡಿದರು. “ನೀವು ಧರ್ಮ ಕೇಳಿ ಗುಂಡು ಹೋಡೆದ್ರೆ, ನಾವು ಧರ್ಮ ಕೇಳಿ ವ್ಯಾಪಾರ ನಿಲ್ಲಿಸುತ್ತೇವೆ” ಎಂದು ಸಂಕಲ್ಪ ಮಾಡಲು ಹಿಂದೂಗಳನ್ನು ಒತ್ತಾಯಿಸಿದರು.
ಮುತಾಲಿಕ್ ತಮ್ಮ ಭಾಷಣದಲ್ಲಿ ಭಗತ್‌ಸಿಂಗ್, ಚಂದ್ರಶೇಖರ್ ಆಜಾದ್, ಸಾವರ್ಕರ್, ಶಿವಾಜಿ ಮಹಾರಾಜರ ಕ್ರಾಂತಿಚೇತನವನ್ನು ಉಲ್ಲೇಖಿಸಿ, ಶಾಂತಿ ಮಾತುಗಳನ್ನು ಬಿಟ್ಟು ಕ್ರಾಂತಿಯ ದಾರಿಯಲ್ಲಿ ಹಿಂದೂ ಸಮಾಜ ನಡೆಯಬೇಕು ಎಂದು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / lalita MP