ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗ್ರೇಟ್ ನಿಕೋಬಾರ್ ಅಭಿವೃದ್ಧಿ ಯೋಜನೆ ಕುರಿತು ಕಾಂಗ್ರೆಸ್ ಮತ್ತೊಮ್ಮೆ ಕೇಂದ್ರವನ್ನು ಗುರಿಯಾಗಿಸಿಕೊಂಡಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಜೈರಾಮ್ ರಮೇಶ್, ಈ ಯೋಜನೆಯಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದು, ಇದು ಪರಿಸರ ಹಾಗೂ ಬುಡಕಟ್ಟು ಸಮುದಾಯಗಳ ಹಕ್ಕುಗಳಿಗೆ ಧಕ್ಕೆಯಾಗಬಹುದು ಎಂದಿದ್ದಾರೆ.
ಅಂಡಮಾನ್-ನಿಕೋಬಾರ್ ಆಡಳಿತವು 2022ರ ಆಗಸ್ಟ್‌ನಲ್ಲಿ ಯೋಜನೆಗೆ ಸಂಬಂಧಿಸಿದ ಅರಣ್ಯ ಹಕ್ಕುಗಳ ಇತ್ಯರ್ಥ ಪ್ರಮಾಣಪತ್ರ ನೀಡಿದ್ದರೂ, ನಿವೃತ್ತ ಐಎಎಸ್ ಅಧಿಕಾರಿ ಮೀನಾ ಗುಪ್ತಾ ಇದನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ನಿಲುವು ಬದಲಾವಣೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಪರಿಸರ ಅನುಮತಿ ವಿಚಾರ ಕೇಳಿ ಬಾಕಿ ಇರುವುದು, ಸ್ಥಳೀಯ ಆಡಳಿತದಿಂದ ಮತ್ತೆ ವರದಿ ಕೇಳಿರುವುದು ಕೇಂದ್ರದ ಅಸ್ಪಷ್ಟ ನೀತಿಯನ್ನು ತೋರಿಸುತ್ತವೆ ಎಂದು ರಮೇಶ್ ಟೀಕಿಸಿದ್ದಾರೆ.
ಗಾಲ್ಥಿಯಾ ಕೊಲ್ಲಿಯನ್ನು ಪ್ರಮುಖ ಬಂದರು ಎಂದು ಘೋಷಿಸುವ ಕೇಂದ್ರದ ನಿರ್ಧಾರ ಹಾಗೂ ಮರ ಕಡಿಯಲು ಆಹ್ವಾನಿಸಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕೂಡ ಒಂದು ಲೇಖನದ ಮೂಲಕ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ, ಬುಡಕಟ್ಟು ಸಮುದಾಯಗಳ ಸ್ಥಳಾಂತರ ಮತ್ತು ಪರಿಸರ ಹಾನಿಯ ಭಯವನ್ನು ಎತ್ತಿಹಿಡಿದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa