ಹಾವೇರಿ, 12 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಂಡವಾಳ ಶಾಹಿ ಹಾಗೂ ಕಮ್ಯುನಿಸ್ಟ್ ವ್ಯವಸ್ಥೆಗೆ ಸಹಕಾರ ತತ್ವವೇ ಉತ್ತರ. ಆರ್ಥಿಕ ಬೆಳವಣಿಗೆಯ ನಿಯಂತ್ರಣ ಸಹಕಾರ ವ್ಯವಸ್ಥೆ ಅಡಿಯಲ್ಲಿ ಬಂದಾಗ ದೇಶದ ಪ್ರಜಾಪಭುತ್ವ ವ್ಯವಸ್ಥೆಯಲ್ಲಿ ಆರ್ಥಿಕತೆ ಬರುತ್ತದೆ. ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆರ್ಥಿಕ ನೀತಿಯನ್ನು ಜನರ ತೀರ್ಮಾನ ಮಾಡಬೇಕು. ಸಹಕಾರ ರಂಗದಲ್ಲಿ ಅದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಹಾವೇರಿಯ ರಜನಿ ಸಭಾಂಗಣದಲ್ಲಿ ಶ್ರೀ ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ, ಹಾವೇರಿಯ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾಗರಿಕತೆ ಬೆಳೆದಂತೆ ಮನುಷ್ಯನ ಅವಶ್ಯಕತೆಗಳು ಬೆಳೆಯುತ್ತ ಬಂದಿವೆ. ಇವತ್ತು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕೆನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕನಸಾಗಿದೆ. ಆ ಕನಸು ನನಸಾಗಬೇಕೆಂದರೆ ಹಲವಾರು ಜನರ, ಸಂಘ ಸಂಸ್ಥೆಗಳು ಹಾಗೂ ಸರಕಾರಗಳ ಸಹಾಯ ಆವಶ್ಯಕತೆ ಇದೆ. ನಾವು ಹುಟ್ಟಿದ ತಕ್ಷಣ ಹೋರಾಟ ಮಾಡಲು ಸಾಧ್ಯವಿಲ್ಲ. ಜನ್ಮಪೂರ್ವ ಸಂಬಂಧ ತಾಯಿ, ತಾಯಿಯ ಸಹಕಾರ, ತಂದೆಯ ಸಹಕಾರ, ಗೆಳೆಯರು ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
ನಾವು ಶಿಕ್ಷಣ ಪಡೆದು ನಮ್ಮ ಸ್ವಂತ ಕಾಲಮೇಲೆ ನಿಲ್ಲಬೇಕು ಎಂದಾಗ ಆರ್ಥಿಕ ಸಹಾಯ ಬೇಕಾಗುತ್ತದೆ. ಆರ್ಥಿಕ ಸಹಾಯ ದುಡಿಮೆಯಿಂದ ಬರುತ್ತದೆ. ಮೊದಲು ದುಡ್ಡೆ ದೊಡ್ಡಪ್ಪ ಅಂತ ಇತ್ತು. ಈಗ ದುಡಿಮೆಯೇ ದೊಡ್ಡಪ್ಪ ಅಂತ ಆಗಿದೆ. ಅದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಅಂದರು. ಕಾಯಕಕ್ಕೆ ಯಾರು ಮಹತ್ವ ಕೊಡುತ್ತಾರೆ. ಆ ಸಮಾಜ ಯಾವತ್ತೂ ಬಡತನ ಎದುರಿಸುವುದಿಲ್ಲ ಎಂದು ಹೇಳಿದರು.
ಇವತ್ತು ಸುವರ್ಣ ಸಹಕಾರ ಪತ್ತಿನ ಸಹಕಾರ ಸಂಘ ಅನೇಕ ಜನರ ಏಳಿಗೆಗಾಗಿ ಅವರ ದುಡಿಮೆಗಾಗಿ ಸಹಾಯ ಮಾಡುವಂತಹ ಅತ್ಯುತ್ತಮವಾಗಿರುವ ಒಂದು ವ್ಯವಸ್ಥೆ. ಇದಕ್ಕಿಂತ ಉತ್ತಮ ವ್ಯವಸ್ಥೆ ಯಾವುದೂ ಇಲ್ಲ. ಸಹಕಾರ ವ್ಯವಸ್ಥೆಗೆ ಇರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಬಂಡವಾಳ ಶಾಹಿ ವ್ಯವಸ್ಥೆ ಹಾಗೂ ಕಮ್ಯುನಿಸ್ಟ್ ವ್ಯವಸ್ಥೆಗೆ ಸಹಕಾರ ತತ್ವವೇ ಉತ್ತರ ಎಂದು ಹೇಳಿದರು.
ಬಂಡವಾಳ ಶಾಹಿಯಲ್ಲಿ ಕೇವಲ ಉತ್ಪಾದನೆ, ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಕೇವಲ ವಿತರಣೆ ಇರುತ್ತದೆ. ಆರ್ಥಿಕ ಬೆಳವಣಿಗೆಯ ನಿಯಂತಣ ಸಹಕಾರ ವ್ಯವಸ್ಥೆ ಅಡಿಯಲ್ಲಿ ಬಂದಾಗ ದೇಶದಲ್ಲಿ ಪಜಾಪಭುತ್ವ ವ್ಯವಸ್ಥೆಯಲ್ಲಿ ಆರ್ಥಿಕತೆ ಬರುತ್ತದೆ. ಈಗ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಜಾಪಭುತ್ವ ಇದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಮ್ಮ ಬಳಿ ಬಂಡವಾಳ ಇಲ್ಲದ ಕಾರಣ ಮಾರುಕಟ್ಟೆಯಿಂದ ಬಂಡವಾಳ ಪಡೆದು ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತವೆ. ಮಾರುಕಟ್ಟೆಯ ಆದ್ಯತೆ ಏನಿದೆ ಅದು ಸರ್ಕಾರವನ್ನು ನಿಯಂತ್ರಣ ಮಾಡುತ್ತದೆ ಎಂದು ಹೇಳಿದರು.
ನಿಜವಾಗಿ ಜನರಿಂದ ಆಯ್ಕೆಯಾದ ಸರ್ಕಾರ ಜನರ ಏಳಿಗೆಗೆ ಕೆಲಸ ಮಾಡಬೇಕೆಂದರೆ ಆರ್ಥಿಕ ಶಕ್ತಿಯೂ ಬರಬೇಕು. ಸರ್ಕಾರ ಶ್ರೀಮಂತರವಾಗಿರಬೇಕಾ ಅಥವಾ ಜನರು ಶ್ರೀಮಂತವಾಗಿರಬೇಕಾ ಎಂಬ ಪ್ರಶ್ನೆ ಇದೆ. ನಮ್ಮಲ್ಲಿ ಸರ್ಕಾರ ಶ್ರೀಮಂತ ಇದೆ. ನಮ್ಮ ಪಧಾನಿ ಮೋದಿಯವರ ಆರ್ಥಿಕ ಕಾರ್ಯಕ್ರಮದಿಂದ ಕಳೆದ ಹತ್ತು ವರ್ಷದಲ್ಲಿ 25 ಕೋಟಿ ಜನ ಬಡತನದಿಂದ ಮೇಲೆ ಬಂದಿದ್ದಾರೆ ಎಂದು ಹೇಳಿದರು.
ಆರ್ಥಿಕವಾಗಿ ಸ್ವತಂತ್ರವಾಗಿ ಜನರು ಬದುವಂತಾಗಬೇಕಾದರೆ, ಆರ್ಥಿಕತೆ ಜನರ ಕೈಯಲ್ಲಿ ಬರಬೇಕು. ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆರ್ಥಿಕ ನೀತಿಯನ್ನು ಜನರು ತೀರ್ಮಾನ ಮಾಡಬೇಕು. ಸಹಕಾರ ರಂಗದಲ್ಲಿ ಅದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಸ್ವಾತಂತ್ರ್ಯ ಬಂದು ಎಪ್ಪತ್ತೆಂಟು ವರ್ಷ ಆದರೂ ಕೂಡ ಆರ್ಥಿಕ ಸ್ವಾತಂತ್ರ್ಯವನ್ನು ಸ್ಥಾಪನೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ದೊಡ್ಡ ಮಟ್ಟದ ಆರ್ಥಿಕ ಕಾಂತಿ ಆಗಬೇಕು ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa