ಬಳ್ಳಾರಿ, 12 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ನ್ಯಾಯಾಲಯದ ಹಳೆಯ ಕಟ್ಟಡದಲ್ಲಿ ಕಾನೂನು ಸ್ನಾತಕೋತ್ತರ ಕಾಲೇಜು ಪ್ರಾರಂಭಕ್ಕೆ ಪ್ರಯತ್ನ, ಬಳ್ಳಾರಿಯ ಐತಿಹಾಸಿಕ ಏಕಶಿಲಾ ಬೆಟ್ಟಕ್ಕೆ `ರೋಪ್-ವೇ' ಅಳವಡಿಸಲು ಕ್ರಮ ಮತ್ತು ಅಂಡರ್ ಬ್ರಿಡ್ಜ್ ಅಗಲೀಕರಣದ ವಿಷಯಗಳಿಗೆ ಚಾಲನೆ ಸಿಕ್ಕಿದೆ.
ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಬಳ್ಳಾರಿಯಲ್ಲಿರುವ ಐತಿಹಾಸಿಕ ಪ್ರಸಿದ್ಧವಾಗಿರುವ ನ್ಯಾಯಾಲಯದ ಹಳೆಯ ಕಟ್ಟಡದವನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಿಗೆ ಪತ್ರ ಬರೆದಿದ್ದು, ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಬಳ್ಳಾರಿಯ ನ್ಯಾಯಾಲಯದ ಹಳೆಯ ಕಟ್ಟಡಕ್ಕೆ ಎರೆಡು ಶತಮಾನಗಳ ಇತಿಹಾಸವಿದೆ. ಈ ಕಟ್ಟಡದಲ್ಲಿಯ ನ್ಯಾಯದಾನ ಮತ್ತು ಆಡಳಿತ ವ್ಯವಸ್ಥೆಯು ದೇಶದಲ್ಲಿಯೇ `ಮಾದರಿ'ಯಾಗಿದ್ದ ಮಹತ್ತರ ಮೈಲುಗಲ್ಲುಗಳಿವೆ. ಆದರೆ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳು ತಾಳೂರು ರಸ್ತೆಯ ನೂತನ ಕಟ್ಟಡಕ್ಕೆ ಸ್ಥಳಾಂತರ ಆದ ನಂತರ, ಈ ಕಟ್ಟಡದ ಬಳಕೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಶಾಸಕ ನಾರಾ ಭರತರೆಡ್ಡಿ ಅವರು, ನ್ಯಾಯಲಯದ ಹಳೆಯ ಕಟ್ಟಡದಲ್ಲಿ `ಕಾನೂನು ಸ್ನಾತಕೋತ್ತರ ಪದವಿ ಕಾಲೇಜು' ಪ್ರಾರಂಭಿಸಲು ಅವಕಾಶ ಕೋರಿ ಸಚಿವರಿಗೆ ಪತ್ರ ಬರೆದಿದ್ದು, ಸಚಿವ ಹೆಚ್.ಕೆ. ಪಾಟೀಲ್ ಅವರು, ಈ ಕುರಿತು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧಿಕಾರಿಗಳು `ಕಾನೂನು ಸ್ನಾತಕೋತ್ತರ ಪದವಿ ಕಾಲೇಜು' ಪ್ರಾರಂಭಿಸಲು ಅನುಮತಿ ನೀಡಿದಲ್ಲಿ ಸರ್ಕಾರಿ ಕಾನೂನು ಕಾಲೇಜು ಬಳ್ಳಾರಿಯಲ್ಲಿ ಪ್ರಾರಂಭವಾಗುವ ಸಾಧ್ಯತೆಗಳು ಹೆಚ್ಚಿವೆ.
ಏಷ್ಯಾದ ಎರಡನೆಯ ಏಕಶಿಲಾಬೆಟ್ಟ ಎಂಬ ಕೀರ್ತಿಯನ್ನು ಪಡೆದಿರುವ ಬಳ್ಳಾರಿ ಗುಡ್ಡಕ್ಕೆ `ರೋಪ್-ವೇ' ಅಳವಡಿಸುವ ಪ್ರಯತ್ನ ನಿರಂತರ ನಡೆದಿದೆ. ಆದರೆ, ಪ್ರಸ್ತುತ ಸರ್ಕಾರ ಶಾಸಕ ನಾರಾ ಭರತರೆಡ್ಡಿ ಅವರ ಪ್ರಯತ್ನಕ್ಕೆ ಪ್ರವಾಸೋದ್ಯಮ ಸಚಿವರು ಅಧಿಕಾರಿಗಳಿಗೆ ಪತ್ರ ಬರೆದು, ಸ್ಥಳಕ್ಕೆ ಭೇಟಿ ನೀಡಿ, `ಅಧ್ಯಯನ ನಡೆಸಿ, ವರದಿ ಸಲ್ಲಿಸಲು' ಸೂಚನೆ ನೀಡಿದ್ದಾರೆ. ಈವರೆಗೆ ಈ ವಿಷಯ ರಾಜಕಾರಣಿಗಳ ಪ್ರಚಾರದ ವಿಷಯವಾಗಿತ್ತು. ಪ್ರಸ್ತುತ ಸ್ಥಳ ವೀಕ್ಷಣೆ ಮತ್ತು ಅಧ್ಯಯನಕ್ಕೆ ನಿರ್ದೇಶನ ನೀಡಿರುವುದು ಸ್ವಾಗತಾರ್ಹ. ಅಲ್ಲದೇ, ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಒಳ್ಳೆಯ ಪ್ರಯತ್ನವಾಗಿದೆ ಎಂದೇ ಪರಿಗಣಿಸಲಾಗಿದೆ.
ಅಷ್ಟೇ ಅಲ್ಲ, ಗಡಿಗೆ ಚೆನ್ನಪ್ಪ ವೃತ್ತ, ಇಂದಿರಾಗಾಂಧಿ ವೃತ್ತ, ವಾಲ್ಮೀಕಿ ವೃತ್ತ, ದುರ್ಗಮ್ಮ ಗುಡಿ ವೃತ್ತವನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಶಾಸಕ ನಾರಾ ಭರತರೆಡ್ಡಿ ಅವರು ನಡೆಸುತ್ತಿರುವ `ಅಭಿವೃದ್ಧಿ ಮತ್ತು ನಗರ ಸೌಂದರೀಕರಣ'ಕ್ಕೆ ಪೂರಕವಾಗಿ ಬಳ್ಳಾರಿಯ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಅಂಡರ್ ಬ್ರಿಡ್ಜ್ ಅಗಲೀಕರಣದ ಕಡತಕ್ಕೂ ಚಾಲನೆ ಸಿಕ್ಕಿದೆ. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು ರೈಲ್ವೆ ಸೇತುವೆ ವಿಸ್ತರಣೆಗೆ 8 ಕೋಟಿ ರೂಪಾಯಿಗಳನ್ನು ಪಾವತಿಸಿ 3-4 ವರ್ಷಗಳಾಗಿದ್ದು, ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯ ಅನುಮೋದನೆಗೆ ಕಡತ ಚಾಲನೆ ಸಿಕ್ಕಿರುವುದು ಸ್ವಾಗತಾರ್ಹ.
ಈ ನಿಟ್ಟಿನಲ್ಲಿ ಶಾಸಕ ನಾರಾ ಭರತರೆಡ್ಡಿ ಅವರು, ಬಳ್ಳಾರಿ ನಗರದಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆಗಳು - ವೃತ್ತಗಳು ಮತ್ತು ಅಭಿವೃದ್ಧಿಯ ಜೊತೆಯಲ್ಲಿ ನಗರ ಸೌಂದರೀಕರಣಕ್ಕೆ ಆದ್ಯತೆ ನೀಡಿ 1200 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್