ಬಳ್ಳಾರಿ, 12 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಹಿಳಾ ರೈತರ ಸಬಲೀಕರಣ, ಶಾಶ್ವತ ಕೃಷಿ ಪದ್ಧತಿಗಳ ಬಲವರ್ಧನೆ ಮತ್ತು ಗ್ರಾಮೀಣ ಜೀವನೋಪಾಯ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ ಅವರು ಹೇಳಿದ್ದಾರೆ.
ಬಳ್ಳಾರಿ ತಾಲ್ಲೂಕಿನ ಮೋಕಾ ಗ್ರಾಮದ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ- ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಬಳ್ಳಾರಿ ಮತ್ತು ಮೋಕಾ ಗ್ರಾಮ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮುದ್ದು ಮಲ್ಲೇಶ್ವರ ಸಂಜೀವಿನಿ ಮಹಿಳಾ ಕಿಸಾನ್ ಪ್ರೋಡ್ಯೂಸರ್ ಕಂಪನಿಯ 2ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುದ್ದು ಮಲ್ಲೇಶ್ವರ ಸಂಜೀವಿನಿ ಮಹಿಳಾ ಕಿಸಾನ್ ಪ್ರೋಡ್ಯೂಸರ್ ಕಂಪನಿಯಲ್ಲಿ ಒಟ್ಟು 6 ಗ್ರಾಮ ಪಂಚಾಯಿತಿಯ 1000 ಜನ ಮಹಿಳೆಯರು ಷೇರುದಾರರಾಗಿದ್ದು, 10 ಜನ ನಿರ್ದೇಶಕರನ್ನು ಒಳಗೊಂಡಿದೆ. ಕಂಪನಿಯು ಮುಖ್ಯ ಕಚೇರಿಯ ಮೋಕಾ ಗ್ರಾಮ ಪಂಚಾಯಿತಿಯಲ್ಲಿ ಸ್ಥಾಪಿತವಾಗಿದೆ. ಪ್ರತಿಯೊಬ್ಬ ಷೇರುದಾರರು ತಲಾ ರೂ.1500 ಬಂಡವಾಳ ಹೂಡಿದ್ದು, ಒಟ್ಟು 15 ಲಕ್ಷ ರೂ. ಷೇರು ಬಂಡವಾಳ ಕಂಪನಿಯು ಹೊಂದಿದೆ. ಕಂಪನಿಯ ಎಲ್ಲಾ ಮಹಿಳೆಯರು ಮಾಲೀಕರಿದ್ದಂತೆ. ಕಂಪನಿ ಅಭಿವೃದ್ದಿ ಹೊಂದಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಮಾಸಿಕ ಸಂತೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮೋಕಾ ಗ್ರಾಪಂ ಅಧ್ಯಕ್ಷರಾದ ಈರಾಳು ಫಕೀರಮ್ಮ, ಜಿಪಂ ಸಹಾಯಕ ಅಡಳಿತ ಅಧಿಕಾರಿ ಬಸವರಾಜ ಹೀರೆಮಠ, ಬಳ್ಳಾರಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಐ ಬಾರಿಕರ್, ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ, ಮೋಕಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜ್ಯೋತಿ.ಐ., ಮೋಕಾ ಗ್ರಾಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಮ್ಮ, ಎನ್‍ಆರ್‍ಎಲ್‍ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ.ಎಂ., ಜಿಲ್ಲಾ ವ್ಯವಸ್ಥಾಪಕರಾದ ವಿಜಯ ಕುಮಾರ್.ಪಿ., ರಘು ವರ್ಮ, ಅಪೂರ್ವ ಕಾಂತರಾಜು ಕೆ.ಕೆ., ಬಳ್ಳಾರಿ ತಾಪಂ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ವಿ.ಗಂಗಾಧರ, ಎಂಕೆಪಿಸಿ ಸಿಇಓ ಬಸವರಾಜ, ಕಂಪನಿಯ ಅಧ್ಯಕ್ಷೆ ರಾಜೇಶ್ವರಿ, ಕಂಪನಿಯ ನಿರ್ದೇಶಕ ಮಂಡಳಿಯ ಸದಸ್ಯರು, ತಾಲ್ಲೂಕು ಮಟ್ಟದ ಎನ್‍ಆರ್‍ಎಲ್‍ಎಂ ನ ಸಿಬ್ಬಂದಿಗಳು ಸೇರಿದಂತೆ ಕಾರೇಕಲ್ಲು, ಯರಗುಡಿ, ವೇಣೆನೂರು, ಬಸರಕೋಡು ಹಾಗೂ ಬಿಡಿ ಹಳ್ಳಿ ಗ್ರಾಮ ಪಂಚಾಯತಿಗಳ ಒಕ್ಕೂಟದ ಎಲ್ಲಾ ಸಿಬ್ಬಂದಿಗಳು ಮತ್ತು ಎಂಕೆಪಿಸಿ ಕಂಪನಿಯ ಎಲ್ಲಾ ಶೇರುದಾರರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್