ಕೊಪ್ಪಳ, 12 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಡಾ. ಸಿದ್ದಯ್ಯ ಪುರಾಣಿಕ್ ಟ್ರಸ್ಟ್ ನ ಕಾರ್ಯ ಚಟುವಟಿಕೆಗಳನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಡಾ. ಸಿದ್ದಯ್ಯ ಪುರಾಣಿಕ ಟ್ರಸ್ಟ್‍ನ ನೂತನ ಅಧ್ಯಕ್ಷರಾದ ಅಜ್ಮೀರ ನಂದಾಪುರ ಅವರು ಹೇಳಿದ್ದಾರೆ.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾಡಳಿತ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಡಾ. ಸಿದ್ದಯ್ಯ ಪುರಾಣಿಕ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ನಂತರ ಮಾತನಾಡಿದರು.
ಏನಾದರೂ ಆಗು ಮೊದಲು ಮಾನವನಾಗು ಎಂಬ ಸಂದೇಶವನ್ನು ಕೊಟ್ಟ ಡಾ. ಸಿದ್ದಯ್ಯ ಪುರಾಣಿಕ್ ಅವರ ಹೆಸರಿನಲ್ಲಿ ಟ್ರಸ್ಟ್ ನಮ್ಮ ಜಿಲ್ಲೆಯಲ್ಲಿ ರಚನೆಯಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಕುವೆಂಪು ರವರ ಮನುಜಮತ, ಸಮ ಸಿದ್ದಾಂತವನ್ನು ಜಗತ್ತಿಗೆ ಹೇಳಿಕೊಟ್ಟ ವ್ಯಕ್ತಿ ಡಾ. ಸಿದ್ದಯ್ಯ ಪುರಾಣಿಕ್ ಅವರಾಗಿದ್ದಾರೆ. ಉರ್ದು ಪ್ರಭಾವವಿರುವಂತಹ ಕಾಲದಲ್ಲಿ ಡಾ. ಸಿದ್ದಯ್ಯ ಪುರಾಣಿಕ್ ರವರು ಉರ್ದು, ಸಂಸ್ಕೃತ, ಇಂಗ್ಲೀಷ್, ಕನ್ನಡ ಹಾಗೂ ತೆಲಗು ಭಾಷೆಗಳಲ್ಲಿ ಪಾರಂಗತವಾಗಿರುವ ವ್ಯಕ್ತಿಯಾಗಿದ್ದರು. ನಮ್ಮ ಕಲ್ಯಾಣ ಕರ್ನಾಟಕ ಭಾಗದವರಾದ ಇವರು ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವುದರ ಜೊತೆಗೆ `ಕಾವ್ಯಾನಂದ' ಎಂಬ ಕಾವ್ಯನಾಮದೊಂದಿಗೆ ಹಲವಾರು ಕೃತಿಗಳು, ಕವನ ಸಂಕಲಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಪುರಾಣಿಕ್ ರವರ ಸಿದ್ದಾಂತಗಳನ್ನು ಕರ್ನಾಟಕ ರಾಜ್ಯ ಮತ್ತು ಈಡಿ ದೇಶದಾದ್ಯಂತ ಪರಿಚಯಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್ ಕೆಲಸ ಮಾಡಲಿದೆ ಎಂದರು.
ಡಾ. ಸಿದ್ದಯ್ಯ ಪುರಾಣಿಕ್ ರವರು ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ದ್ಯಾಂಪುರ ಗ್ರಾಮದಲ್ಲಿ ಜನಿಸಿದ್ದರು. ಇಂತಹ ಮಹಾನ ವ್ಯಕ್ತಿಯ ಹೆಸರಿನಲ್ಲಿ ಸರ್ಕಾರದಿಂದ ಟ್ರೆಸ್ಟ್ ರಚನೆಯಾಗಬೇಕೆಂಬುದು ಅನೇಕ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಅದಕ್ಕಾಗಿ ಈ ಹಿಂದೆ ಹಲವಾರು ಪ್ರಯತ್ನಗಳಾಗಿವೆ. ಶಿವರಾಜ ಎಸ್. ತಂಗಡಗಿ ಅವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದಿಂದ ಡಾ. ಸಿದ್ದಯ್ಯ ಪುರಾಣಿಕ್ ಟ್ರಸ್ಟ್ ರಚನೆ ಸಾಧ್ಯವಾಯಿತು. ಈ ಟ್ರಸ್ಟ್ ಸ್ಥಾಪನೆಯಿಂದಾಗಿ ನಮ್ಮ ಭಾಗದ ಅನೇಕ ಪ್ರತಿಭಾವಂತ ಬರಹಗಾರರು, ಲೇಖಕರು, ಕವಿ, ಸಾಹಿತಿಗಳಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ ಎಂದು ಹೇಳಿದರು.
ರಾಜ್ಯ ಮತ್ತು ವಿಭಾಗ ಮಟ್ಟದಲ್ಲಿ ಡಾ. ಸಿದ್ದಯ್ಯ ಪುರಾಣಿಕ್ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲು ಯೋಜನೆ ರೂಪಿಸಲಾಗುವುದು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಡಾ. ಸಿದ್ದಯ್ಯ ಪುರಾಣಿಕ್ ಅವರ ಸಾಹಿತ್ಯದ ಕುರಿತು ಅಧ್ಯಯನಗಳು ನಡೆಯಬೇಕು. ಪುರಾಣಿಕ್ ರವರ ಹೆಸರಿನಲ್ಲಿ ಕೊಪ್ಪಳ ಅಥವಾ ಕುಕನೂರಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆ ಮತ್ತು ಅವರ ಪುಸ್ತಕದ ಸಣ್ಣ ಸಣ್ಣ ಕೈಪಿಡಿಗಳನ್ನು ಸಿದ್ದಪಡಿಸಿ ಮಕ್ಕಳಿಗೆ ಮಾಹಿತಿ ನೀಡುವುದು ಹಾಗೂ ಪುಸ್ತಕಗಳ ಮರು ಮುದ್ರಿಸಿ ಡಾ. ಸಿದ್ದಯ್ಯ ಪುರಾಣಿಕ ರವರ ಚಿಂತನೆ, ಆದರ್ಶಗಳನ್ನು ಎಲ್ಲರಿಗೂ ಪರಿಚಯಿಸಲು ಕ್ರಮ ಕೈಗೊಳ್ಳಲಾಗುವುದು. ಡಾ. ಸಿದ್ದಯ್ಯ ಪುರಾಣಿಕ್ ರವರ ಜನ್ಮದಿನವನ್ನು ಉತ್ಸವವನ್ನಾಗಿ ಮತ್ತು ಅವರ ಪುಣ್ಯಸ್ಮರಣೆಯ ದಿನವನ್ನು ಕಾವ್ಯ, ವಿಚಾರ ಕಮ್ಮಟದಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶ ಹೊಂದಲಾಗಿದೆ. ಡಾ. ಸಿದ್ದಯ್ಯ ಪುರಾಣಿಕ್ ಅವರ `ಏನಾದರೂ ಆಗು ಮೊದಲು ಮಾನವನಾಗು' ಎಂಬ ಸಂದೇಶಗಳನ್ನು ಬಸ್ ನಿಲ್ದಾಣ ಮತ್ತು ಶಾಲಾ ಕಾಲೇಜುಗಳ ಗೋಡೆಗಳಲ್ಲಿ ಬರೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ್ ಜಿ., ಡಾ. ಸಿದ್ದಯ್ಯ ಪುರಾಣಿಕ ಟ್ರಸ್ಟ್ ಸದಸ್ಯರಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಶಿ.ಕಾ ಬಡಿಗೇರ, ಡಾ. ಗೀತಾ ಚಿ. ಪಾಟೀಲ್, ಡಾ. ಹನುಮಂತಪ್ಪ ಚಂದಲಾಪೂರ, ಹನುಮಂತಪ್ಪ ವಡ್ಡರ, ರಮೇಶ ಬನ್ನಿಕೊಪ್ಪ, ರತ್ನಮ್ಮ ರತ್ನಾಕರ್, ಪ್ರೇಮಾ ಎಸ್. ಮುದಗಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್