ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ, ಕಲ್ಯಾಣ ಹಾಗೂ ಮೂಲಸೌಕರ್ಯ ಸಂಬಂಧಿತ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸಭೆಯಲ್ಲಿ ‘ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2025’, ‘ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ತಿದ್ದುಪಡಿ) ಆದೇಶ, 2025’ ಸೇರಿದಂತೆ ಹಲವು ಕಾನೂನು ತಿದ್ದುಪಡಿ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು.
ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಹ್ವಾನ ಪತ್ರಿಕೆ, ವೇದಿಕೆ ಶಿಷ್ಟಾಚಾರ ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲು ಸಹ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಆರೋಗ್ಯ ಕ್ಷೇತ್ರದಲ್ಲಿ ಮಾಲೂರು, ಮಾಗಡಿ, ಕುಶಾಲನಗರ, ಜಗಳೂರು ಸೇರಿದಂತೆ ಹಲವು ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಹಾಗೂ ದಾವಣಗೆರೆ ಜಿಲ್ಲಾ ಆಸ್ಪತ್ರೆ, ಮಂಗಳೂರು ವೆನ್ಹಾಕ್ ಆಸ್ಪತ್ರೆಗಳಿಗೆ ನವೀಕರಣ ಕಾರ್ಯಗಳಿಗೆ ಒಟ್ಟು ₹542 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ 1000 ಹಾಸಿಗೆಗಳಿಗಾಗಿ ಅಗತ್ಯ ಉಪಕರಣಗಳನ್ನು ₹20.05 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ.
ಯಲಹಂಕ ಹಾಗೂ ಹೆಬ್ಬಾಳದಲ್ಲಿ ತಲಾ 100 ಹಾಸಿಗೆ ಸಾಮರ್ಥ್ಯದ ಎರಡು ಹೊಸ ಆಸ್ಪತ್ರೆಗಳು ನಿರ್ಮಾಣವಾಗಲಿವೆ. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಸೇವೆ ವಿಸ್ತರಣೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗೃಹ ಮತ್ತು ಕಲ್ಯಾಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳನ್ನು ಮಾದರಿ ಕಾಲೋನಿಗಳಾಗಿ ರೂಪಾಂತರಿಸಲು ₹398 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ರಾಜ್ಯದ 6,856 ಆದಿವಾಸಿ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲು ಮುಖ್ಯಮಂತ್ರಿಗಳ ಆದಿವಾಸಿ ಗೃಹ ಭಾಗ್ಯ ಯೋಜನೆ ಅಡಿ ₹160 ಕೋಟಿ ಮೀಸಲಿಡಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಪಿರಿಯಾಪಟ್ಟಣದ ರಾವಂದೂರು–ಶಿಡ್ಲುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ರಸ್ತೆ ನಿರ್ಮಾಣಕ್ಕೆ ₹50 ಕೋಟಿ, ಯಲ್ಲಾಪುರದಲ್ಲಿ ಗಂಗಾವಳಿ ನದಿ ಸೇತುವೆಗೆ ₹35 ಕೋಟಿ, ಖಾನಾಪುರ ತಾಲ್ಲೂಕಿನಲ್ಲಿ ಮಲಪ್ರಭಾ ನದಿಗೆ ಸೇತುವೆ ಮತ್ತು ತಟ ರಕ್ಷಣಾ ಗೋಡೆ ನಿರ್ಮಾಣಕ್ಕೆ ₹50 ಕೋಟಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ–5ಕ್ಕೆ ₹4000 ಕೋಟಿ ಅನುಮೋದನೆ ನೀಡಲಾಗಿದೆ.
ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ, ಬಂಕಾಪುರ, ಸವಣೂರು ಪಟ್ಟಣಗಳಿಗೆ ಒಟ್ಟಾರೆ ₹351 ಕೋಟಿ, ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಮತ್ತು ನಿಡಘಟ್ಟ ಶಾಖಾ ನಾಲೆ ಕಾಮಗಾರಿಗಳಿಗೆ ₹293 ಕೋಟಿ, ತುಂಗಭದ್ರಾ ನದಿ ನೀರು ಎತ್ತುವ ಯೋಜನೆಗೆ ₹109 ಕೋಟಿ ಮಂಜೂರು ಮಾಡಲಾಗಿದೆ.
ಪರಿಸರ ಮತ್ತು ಇಂಧನ ಕ್ಷೇತ್ರದಲ್ಲಿ ಬೆಂಗಳೂರಿನ KCDC ಘಟಕ ಆವರಣದಲ್ಲಿ ಗೇಲ್ ಇಂಡಿಯಾ ಕಂಪನಿಯು Compressed Bio-Gas Plant ಸ್ಥಾಪಿಸಲು 25 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಜಾಗ ನೀಡಲು ಅನುಮೋದನೆ ನೀಡಲಾಗಿದೆ. ಜೊತೆಗೆ ಬೈರಮಂಗಲ ಕೆರೆಯಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೂ ₹391.82 ಕೋಟಿ ವೆಚ್ಚದಲ್ಲಿ ಅನುಮೋದನೆ ಲಭಿಸಿದೆ.
ಡಿಜಿಟಲ್ ಆಡಳಿತಕ್ಕೆ ಬಲ ನೀಡುವ ಉದ್ದೇಶದಿಂದ ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ 2.0 (K-GIS 2.0) ಯೋಜನೆಗೆ ₹150 ಕೋಟಿ ಮಂಜೂರು ಮಾಡಲಾಗಿದೆ. ಡಿಜಿ ಕಂದಾಯ ಯೋಜನೆ ಅಡಿ 3,500 Chromebook ಗಳ ಖರೀದಿಗೆ ₹19.25 ಕೋಟಿ ಅನುಮೋದನೆ ದೊರೆತಿದೆ.
ಇದೇ ರೀತಿ ಕಾರ್ಮಿಕರ ಸಹಕಾರ ಸಂಘಗಳ ರಚನೆ, Labour Cess Tracking Software ಅಭಿವೃದ್ಧಿ, ಮಧ್ಯಸ್ಥಿಕೆ ಮತ್ತು ಸಮನ್ವಯ ಕೇಂದ್ರ (ತಿದ್ದುಪಡಿ) ನಿಯಮಗಳಿಗೆ ಅನುಮೋದನೆ, ಕಲಬುರಗಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ಥಾಪನೆ ಸೇರಿದಂತೆ ಹಲವು ಸಮಾಜಮುಖಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ರಾಜ್ಯ ಮಟ್ಟದಲ್ಲಿ ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಡೆಸಲು ಸಹ ಸಚಿವ ಸಂಪುಟ ತೀರ್ಮಾನಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa