ವಾಷಿಂಗ್ಟನ್, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರು ಮುಂದಿನ ಕೆಲ ವಾರಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಉಲ್ಬಣಗೊಂಡಿರುವ ವ್ಯಾಪಾರ ವಿವಾದದ ಪರಿಹಾರಕ್ಕಾಗಿ ಇಬ್ಬರು ನಾಯಕರು ಒಪ್ಪಂದಕ್ಕೆ ಬರಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಹೇಳಿಕೆ ನೀಡಿದ್ದು, ನಮ್ಮ ದೇಶಗಳ ನಡುವೆ ವ್ಯಾಪಾರ ಅಡೆತಡೆಗಳನ್ನು ತೆಗೆದುಹಾಕುವ ಮಾತುಕತೆಗಳು ನಡೆಯುತ್ತಿವೆ. ನನ್ನ ಆತ್ಮೀಯ ಸ್ನೇಹಿತ ಮೋದಿ ಅವರೊಂದಿಗೆ ಶೀಘ್ರದಲ್ಲೇ ಮಾತನಾಡಲು ನಿರೀಕ್ಷಿಸುತ್ತಿದ್ದೇನೆ. ಭಾರತ-ಅಮೆರಿಕ ಎರಡೂ ದೇಶಗಳಿಗೆ ಯಶಸ್ವಿ ತೀರ್ಮಾನ ತಲುಪುವುದು ಕಷ್ಟವಾಗುವುದಿಲ್ಲ ಎಂದು ಬರೆದಿದ್ದಾರೆ.
ರಷ್ಯಾದಿಂದ ಇಂಧನ ಖರೀದಿ ಮಾಡಿದ ಭಾರತ-ಚೀನಾಗೆ ಯುರೋಪಿಯನ್ ಒಕ್ಕೂಟ ಒತ್ತಾಯಿಸಿದಂತೆ, ಅಮೆರಿಕ ಕೂಡಾ ಹೆಚ್ಚುವರಿ ಸುಂಕ ಹೇರಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಇಂತಹ ಸಮಯದಲ್ಲಿ ಟ್ರಂಪ್ ನೀಡಿರುವ ಈ ಸಕಾರಾತ್ಮಕ ಸಂದೇಶ ಗಮನ ಸೆಳೆದಿದೆ.
ಭಾರತದಿಂದ ಆಮದು ಮಾಡುವ ಸರಕುಗಳ ಮೇಲಿನ ಸುಂಕವನ್ನು ಅಮೆರಿಕವು ಕಳೆದ ತಿಂಗಳು ಶೇಕಡಾ 50 ಕ್ಕೆ ದ್ವಿಗುಣಗೊಳಿಸಿದ್ದು, ನವದೆಹಲಿ-ವಾಷಿಂಗ್ಟನ್ ನಡುವಿನ ವ್ಯಾಪಾರ ಉದ್ವಿಗ್ನತೆ ಹೆಚ್ಚಲು ಕಾರಣವಾಗಿತ್ತು. ಈಗ, ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸುವ ಟ್ರಂಪ್ ಅವರ ಪ್ರಯತ್ನ, ದ್ವಿಪಕ್ಷೀಯ ಸಂಬಂಧಗಳಿಗೆ ಎಷ್ಟು ನೆರವಾಗುತ್ತದೆ ಎಂಬುದು ಮುಂದಿನ ವಾರಗಳಲ್ಲಿ ಸ್ಪಷ್ಟವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa