ಬಳ್ಳಾರಿ, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ತಾವು ಉತ್ತಮ ಸಂಘಟಕರಾಗಿದ್ದು ಶರಣ ಸಾಹಿತ್ಯ ಪರಿಷತ್ತನ್ನು ಹೆಚ್ಚು ಕ್ರಿಯಾಶೀಲವಾಗಿ ನಿಮ್ಮ ಜಿಲ್ಲೆಯಲ್ಲಿ ಸಂಘಟಿಸುತ್ತೀರಿ ಎಂಬ ವಿಶ್ವಾಸದ ಮೇರೆಗೆ ನಿಮ್ಮನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಶರಣ ಸಾಹಿತ್ಯ ಮತ್ತು ಸಂಸ್ಕೃತಿಗಳ ಅಭಿಮಾನಿಗಳಾದ ನೀವು ದಯವಿಟ್ಟು ಈ ಹುದ್ದೆಯನ್ನು ಒಪ್ಪಿಕೊಂಡು ಬಳ್ಳಾರಿ ಜಿಲ್ಲಾ ಚಟುವಟಿಕೆಗಳಿಗೆ ಹೊಸ ಚಾಲನೆ ನೀಡಬೇಕೆಂದು ಕೋರುತ್ತೇವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಅವರು ತಿಳಿಸಿದ್ದಾರೆ. ನೇಮಕಾತಿ ಆದೇಶ ಪತ್ರವನ್ನು ನೀಡುವ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಕೆ .ಎಂ. ವೀರೇಶ್ ಮತ್ತು ರಾಜ್ಯ ಕಾರ್ಯದರ್ಶಿಗಳಾದ ಸೋಮಶೇಖರ್ ಗಾಂಜಿ ಸೇರಿದಂತೆ ಇತರರು ಇದ್ದರು.
ಸಿದ್ಧರಾಮ ಕಲ್ಮಠ ಅವರ ಪರಿಚಯ :-
ಸಿದ್ಧರಾಮ ಕಲ್ಮಠ ಅವರು ತಾಯಿಯ ತವರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ರೌಡಕುಂದದಲ್ಲಿ ಜನಿಸಿದರು. ತಂದೆ ದಿ. ಕೆ.ಎಂ. ಮುಪ್ಪಿನಯ್ಯ ತಾಯಿ ಕೆ.ಎಂ.ಶಶಿಕಲಾ. ಬಳ್ಳಾರಿ ವೀರಶೈವ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸಾಹಿತ್ಯ ಚಿನ್ನದ ಪದಕದೊಂದಿಗೆ ಪ್ರಥಮ Rank ಪಡೆದು, ಮೈಸೂರು ವಿ.ವಿ.ಯಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಸಂಘಟನೆಯ ನಂಟನ್ನು ಹೊಂದಿರುವ ಇವರು ಪ್ರಜ್ಞೆ ಪ್ರತಿಷ್ಠಾನದ ಅಧ್ಯಕ್ಷರಾಗಿ, ಬೆಂಗಳೂರಿನ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ, ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬಳ್ಳಾರಿಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಈಗಾಗಲೇ ಸಮ್ಮಿಲನ, ಸತ್ತ ಪ್ರೀತಿಯ ಅರಸುತ್ತ, ಬಿದಿರ ಗಾನ ಎಂಬ ಕವನ ಸಂಕಲನಗಳನ್ನು ರಂಗಾಂತರಂಗ (ವ್ಯಕ್ತಿಚಿತ್ರಣ), ಹುತಾತ್ಮ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ (ಕರ್ನಾಟಕ ಏಕೀಕರಣದ ಏಕೈಕ ಬಲಿದಾನ), ಗಡಿನಾಡ ದೀಪಗಳು (ಸಂಪಾದನೆ), ಚರಿತ್ರೆಯ ಜಾಡಿನಲ್ಲಿ (ಗೌರವ ಸಂಪಾದನೆ). ಕರ್ಪೂರದ ಬೆಳಗು (ನಾಟಕ) ಗಭೂಮಿಯ ಅನರ್ಘ್ಯರತ್ನ ಬಳ್ಳಾರಿ ರಾಘವ,ಹಾಗೂ ಇವರ ಉರಿಯ ಬೆಳಕು ಕತೆಯು 'ಮೊಹರಂ ಕಡೆಯ ದಿನ' ಹೆಸರಿನಲ್ಲಿ ನಾಟಕವಾಗಿ ರೂಪಾಂತರಗೊಂಡಿದೆ.
ಅನೇಕ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಲ್ಲದೆ, ನಾಡು ನುಡಿ ಚಿಂತನೆಯ ನೂರಾರು ಉಪನ್ಯಾಸಗಳನ್ನು ನೀಡಿರುವರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಡಾ.ಎಸ್.ಕೆ. ಕರೀಂ ಖಾನ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಶಸ್ತಿ, ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆಯು ಕನ್ನಡಾಚಾರ್ ಗೌರವ ಪುರಸ್ಕಾರ, ಮಯೂರ ಕಲಾ ಸಂಘದ ಮಕಸಂ ಗೌರವ ಪುರಸ್ಕಾರ, 2017 ಹಂಪಿ ಉತ್ಸವದ ಯುವ ಕವಿಗೋಷ್ಠಿಯ ಅಧ್ಯಕ್ಷತೆ ಹೀಗೆ ನಾಡಿನ ಅನೇಕ ಸಂಸ್ಥೆಗಳು ಗೌರವ ಪುರಸ್ಕಾರಗಳೊಂದಿಗೆ ಸನ್ಮಾನಿಸಿವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್