ಡೆಹ್ರಾಡೂನ್, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಮತ್ತು ಹರ್ಷಿಲ್ ಪ್ರದೇಶಗಳಲ್ಲಿ ಮೇಘಸ್ಫೋಟ ಮತ್ತು ಪ್ರವಾಹದ ನಂತರ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ಮೂರನೇ ದಿನವೂ ಯುದ್ಧೋಪಾದಿಯಲ್ಲಿ ಸಾಗುತ್ತಿವೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಿದರು.
ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಸಿಲುಕಿರುವವರನ್ನು ಮಟ್ಲಿ ಹೆಲಿಪ್ಯಾಡ್‌ಗೆ ಸುರಕ್ಷಿತವಾಗಿ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಧಾಮಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ಗುರುವಾರದವರೆಗೆ 43 ಜನರನ್ನು ರಕ್ಷಿಸಲಾಗಿದೆ, ಅವರಲ್ಲಿ ಹೆಚ್ಚಿನವರು ಯಾತ್ರಿಕರು. ಅನೇಕರು ಇನ್ನೂ ಕಾಣೆಯಾಗಿದ್ದು, ರಜಪೂತ ರೈಫಲ್ಸ್, ಐಟಿಬಿಪಿ, ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ.
ಆರೋಗ್ಯ ಇಲಾಖೆ ಸ್ಥಳದಲ್ಲೇ ವೈದ್ಯಕೀಯ ನೆರವು ಒದಗಿಸುತ್ತಿದ್ದು, ಡೆಹ್ರಾಡೂನ್, ರಿಷಿಕೇಶ್ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಸರ್ಕಾರ, ಎಲ್ಲ ಸಂತ್ರಸ್ತರಿಗೆ ನೆರವು ನೀಡುವುದು ಹಾಗೂ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರುವುದು ತೀವ್ರ ಆದ್ಯತೆಯಾಗಿ ಪರಿಗಣಿಸಿದೆ.
ಪೌರಿ ಗರ್ವಾಲ್, ಚಮೋಲಿ, ಹರಿದ್ವಾರ ಮತ್ತು ರುದ್ರಪ್ರಯಾಗ ಜಿಲ್ಲೆಗಳಲ್ಲಿಯೂ ಮಳೆ, ಭೂಕುಸಿತದಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa