ಕಾಂಗ್ರೆಸ್ ಗೆಲುವಿನ ಕುರಿತು ರಾಹುಲ್ ಉತ್ತರಿಸಲಿ : ಜೋಶಿ
ನವದೆಹಲಿ, 07 ಆಗಸ್ಟ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್‌, ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸುವ ಮೊದಲು ಕರ್ನಾಟಕ ವಿಧಾನಸಭೆ 2023ರ ಚುನಾವಣೆಯಲ್ಲಿ ಅದ್ಹೇಗೆ ಗೆದ್ದಿತು? ಎಂಬುದಕ್ಕೆ ರಾಹುಲ್‌ ಗಾಂಧಿ ಉತ್ತರಿಸಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಸವಾಲು ಹಾಕಿದರು.
Joshi


ನವದೆಹಲಿ, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್‌, ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸುವ ಮೊದಲು ಕರ್ನಾಟಕ ವಿಧಾನಸಭೆ 2023ರ ಚುನಾವಣೆಯಲ್ಲಿ ಅದ್ಹೇಗೆ ಗೆದ್ದಿತು? ಎಂಬುದಕ್ಕೆ ರಾಹುಲ್‌ ಗಾಂಧಿ ಉತ್ತರಿಸಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಸವಾಲು ಹಾಕಿದರು.

ದೆಹಲಿಯಲ್ಲಿ ಇಂದು ಮಾದ್ಯಮದೊಂದಿಗೆ ಮಾತನಾಡಿ, ʼಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ಚುನಾವಣಾ ಆಯೋಗದ ಲೋಪವಿದೆʼ ಎನ್ನುವುದಾದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಇವಿಎಂಗಳು ಮತ್ತು ಚುನಾವಣಾ ಆಯೋಗ ಕಾರ್ಯ ನಿರ್ವಹಿಸಿದೆ. ಹಾಗಾದರೆ ಕಾಂಗ್ರೆಸ್‌ನವರು ಹೇಗೆ ಆಯ್ಕೆಯಾದರು? ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರ ವಾದ ತರ್ಕಬದ್ಧವಲ್ಲ. 2020ರಲ್ಲಿಯೂ ಆಯ್ಕೆಯಾಗಿದ್ದರು. ಆಗದೇ ಚುನಾವಣಾ ಆಯೋಗ ಕಾರ್ಯ ನಿರ್ವಹಿಸುತ್ತಿತ್ತು. ಲೋಪವಾಗಿದ್ದರೆ ಈವರೆಗೂ ಏಕೆ ಪ್ರಕರಣ ದಾಖಲಿಸಲಿಲ್ಲ? ಮತ್ತು ದಾಖಲೆ ಸಲ್ಲಿಸಲಿಲ್ಲ? ಎಂದು ಪ್ರಶ್ನಿಸಿದ ಜೋಶಿ, ಈಗ ಒಂದು ವರ್ಗವನ್ನು ಸಮಾಧಾನಪಡಿಸಲು ಈ ನಡೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣಾ ಆಯೋಗದ ಕಾರ್ಯ ನಿರ್ವಹಣೆ ಬಗ್ಗೆ ಸಂಸತ್ತು ಚರ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಲೋಕಸಭೆ ಮಾಜಿ ಸ್ಪೀಕರ್ ಬಲರಾಮ್ ಜಾಖರ್ ತೀರ್ಪಿತ್ತಿದ್ದಾರೆ. ಇನ್ನು, ಸುಪ್ರೀಂ ಕೋರ್ಟ್‌ನಲ್ಲಿ ಸಹ ವಿಚಾರಣೆ ನಡೆಯುತ್ತಿದ್ದು, ಇದು ಕಾನೂನು ವ್ಯಾಪ್ತಿಗೊಳಪಟ್ಟಿದೆ. ಹಿಂದೆಯೂ SIR ನಡೆಸಲಾಗಿದೆ. ಆದರೆ, ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

2023ರಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಸಹ ಬಿಜೆಪಿಯೇ ಅಧಿಕಾರದಲ್ಲಿತ್ತು. ಹಾಗಿದ್ದರೂ ಕಾಂಗ್ರೆಸ್ ಬಹುಮತದಿಂದ ಗೆದ್ದಿತು. ಆಗ ಚುನಾವಣಾ ಆಯೋಗ ಮತ್ತು ಇವಿಎಂ ಎಲ್ಲಾ ಚೆನ್ನಾಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಾಕ್ಷಣ ನಿಮಗೆ ಚುನಾವಣಾ ಆಯೋಗ ಚೆನ್ನಾಗಿಲ್ಲ, ಇವಿಎಂಗಳು ವಿಶ್ವಾಸಾರ್ಹವಲ್ಲ ಅಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು ಜೋಶಿ.

ಕರ್ನಾಟಕದಲ್ಲಿ ವಿಧಾನಸಭೆ ಫಲಿತಾಂಶ ನಿಮ್ಮ ಪರವಾಗಿತ್ತು. ಆದರೆ ಲೋಕಸಭೆ ಇರಲಿಲ್ಲ. ಮಹಾರಾಷ್ಟ್ರದಲ್ಲಿ ಲೋಕಸಭೆ-ವಿಧಾನಸಭೆ ನಿಮ್ಮಂತೆ ಆಗಲಿಲ್ಲ. ದೇಶ ಮತ್ತು ಜಗತ್ತಿಗೆ ಏನನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದೀರಿ? ಭಾರತದಲ್ಲಿ ಚುನಾವಣೆಗಳು ಸರಿಯಾಗಿ ನಡೆಯುವುದಿಲ್ಲ ಎಂದು ಸಾರಲು ಪ್ರಯತ್ನಿಸುತ್ತಿದ್ದೀರಾ? ಎಂದು ಸಚಿವ ಜೋಶಿ ಪ್ರಶ್ನಿಸಿದರು.

ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ಸಾಂಸ್ಥಿಕ ಸಂಸ್ಥೆಗಳ ವಿರುದ್ಧ ಮಾತನಾಡುತ್ತಾರೆ. ಚುನಾವಣೆಗಳಲ್ಲಿ ಅಕ್ರಮ ನಡೆದರೆ ನಿಮ್ಮ ಅಭ್ಯರ್ಥಿಗಳು ಜಾರ್ಖಂಡ್‌ನಲ್ಲಿ ಹೇಗೆ ಗೆದ್ದರು? ಜಮ್ಮು ಮತ್ತು ಕಾಶ್ಮೀರದಲ್ಲಿ ಹೇಗೆ ಗೆದ್ದಿದ್ದೀರಿ? ಸ್ವಲ್ಪ ತಾರ್ಕಿಕವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದ ಸಚಿವರು, ಜನರು ಬುದ್ಧಿವಂತರಿದ್ದಾರೆ. ಹಾಗಾಗಿಯೇ ತಮ್ಮ ಪಕ್ಷವನ್ನು ವಿಪಕ್ಷದಲ್ಲಿ ಸ್ಥಾನದಲ್ಲಿರಿಸಿದ್ದಾರೆ ಮತ್ತು ಮೂರೇ ಮೂರು ರಾಜ್ಯಗಳಲ್ಲಿ ಆಡಳಿತ ನೀಡಿದ್ದಾರೆ ಎಂದು ರಾಹುಲ್‌ ಗಾಂಧಿಗೆ ಚಾಟಿ ಬೀಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande