ಗದಗ, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ಅಗಸ್ಟ 15 ರಂದು ಜರುಗುವ ಸ್ವಾತಂತ್ರೋತ್ಸವ ದಿನಾಚರಣೆ ಅಚ್ಚುಕಟ್ಟಾಗಿ ಶಿಸ್ತಿನಿಂದ ಜರುಗಲು ಸಂಬಂದಿತ ಇಲಾಖಾಧಿಕಾರಿಗಳು ಪೂರ್ವತಯಾರಿ ಮಾಡಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸಂಬAಧಿತ ಅಧಿಕಾರಿಗಳಿಗೆ ಕಾರ್ಯಕ್ರಮದ ಯಶಸ್ವಿನ ಕುರಿತಂತೆ ಸೂಕ್ತ ನಿರ್ದೇಶನಗಳನ್ನು ನೀಡಿ ಮಾತನಾಡಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಅಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಕ್ರೀಡಾಂಗಣದಲ್ಲಿ ನೆರೆದ ಸಾರ್ವಜನಿಕರಿಗೆ ಸ್ವಾತಂತ್ಯೋತ್ಸವ ಸಂದೇಶ ನೀಡುವರು. ಶಾಲಾ ಮಕ್ಕಳು ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ಮುಂಚೆಯೇ ಆಗಮಿಸಿ ನಿಗದಿತ ಸ್ಥಳದಲ್ಲಿ ಕುಳಿತುಕೊಂಡು ಕಾರ್ಯಕ್ರಮದ ಮುಗಿಯುವವರೆಗೆ ಹಾಜರಿರುವಂತೆ ಆಯಾ ಶಾಲೆಯ ಶಿಕ್ಷಕರು ಹಾಗೂ ನಿಯೋಜಿಸಿದ ಅಧಿಕಾರಿಗಳು ನಿಗಾ ವಹಿಸಬೇಕು. ಬೆಳಿಗ್ಗೆ 8.30 ರೊಳಗಾಗಿ ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಕ್ರೀಡಾಂಗಣದಲ್ಲಿ ತಮ್ಮ ಇಲಾಖಾ ಸಿಬ್ಬಂದಿಗಳೊ0ದಿಗೆ ಹಾಜರಿರಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು, ಸನ್ಮಾನ ಸಮಾರಂಭಗಳು ನಡೆಯುವಾಗ ಯಾವುದೇ ಗೊಂದಲಗಳಾಗದಂತೆ ಅಚ್ಚುಕಟ್ಟಾಗಿ ಜರುಗುವಂತೆ ಕ್ರಮ ವಹಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ಅಂಬುಲನ್ಸ್ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ ವೇದಿಕೆಯಲ್ಲಿ ಶಿಷ್ಟಾಚಾರದಂತೆ ಕಾರ್ಯಕ್ರಮ ನಿರ್ವಹಣೆಯಾಗಬೇಕು. ನೆರೆದ ಸಾರ್ವಜನಿಕರೆಲ್ಲರಿಗೂ ಸಚಿವರ ಸಂದೇಶ ಕೇಳಿಸುವಂತೆ ಧ್ವನಿವರ್ಧಕದ ವ್ಯವಸ್ಥೆ ಮಾಡಬೇಕು. ಮತ್ತು ಮಕ್ಕಳಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಕಾರ್ಯಕ್ರಮ ನಿಗದಿಪಡಿಸಿದ ಸಮಯಕ್ಕೆ ಜರುಗುವಂತೆ ನಿಗಾ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ್ ಅವರು ಮಾತನಾಡಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸಿದ ಶಾಲಾ ಮಕ್ಕಳು ಅನವಶ್ಯಕವಾಗಿ ಕ್ರೀಡಾಂಗಣದ ಹೊರ ಆವರಣದಲ್ಲಿ ಮಾರಾಟ ಮಾಡುವ ಕುರುಕಲು ತಿಂಡಿಯನ್ನು ಸೇವಿಸದಂತೆ ಶಾಲಾ ಶಿಕ್ಷಕರು ನಿಗಾ ವಹಿಸಬೇಕು. ಕಾರ್ಯಕ್ರಮ ಮುಗಿಯುವವರೆಗೆ ಶಾಲಾ ಮಕ್ಕಳು ಅಲ್ಲಿಯೇ ಕುಳಿತುಕೊಂಡು ನಂತರ ಶಾಂತಿಯುತವಾಗಿ ನಿರ್ಗಮಿಸುವಂತೆ ಕ್ರಮ ವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್. ಮಾತನಾಡಿ ಅಗಸ್ಟ 15 ಕ್ಕೂ ಮೊದಲು ಮೂರು ದಿನ ಮುಂಚಿತವಾಗಿಯೇ ನಗರಸಭೆಯ ಅಧಿಕಾರಿಗಳು ನಗರದ ಪ್ರಮುಖ ವೃತ್ತಗಳ ಸ್ವಚ್ಛತೆಗೆ ಹಾಗೂ ಜಿಲ್ಲಾ ಕ್ರೀಡಾಂಗಣದ ಸ್ವಚ್ಛತೆಗೆ ಆದ್ಯತೆ ವಹಿಸಿ ಶುಚಿಗೊಳಿಸಬೇಕು. ಅಲ್ಲದೇ ಪ್ರಮುಖ ವೃತ್ತಗಳಲ್ಲಿ ಮುಂಚಿತಾಗಿಯೇ ದೀಪಾಲಂಕಾರ ಮಾಡಬೇಕು ಎಂದು ಸೂಚಿಸಿದರು. ಧ್ವಜ ಸ್ತಂಬ, ವೇದಿಕೆ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು. ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರೊಂತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಉತ್ಸಾಹದಿಂದ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೊಟೂರ, ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜ ಮಲ್ಲೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ನೀಲಗುಂದ, ತಹಶೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ನಂದಾ ಹಣಬರಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ.ಮಸನಾಯಕ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ, ಕ್ರೀಡಾ ಇಲಾಖೆಯ ಅಧಿಕಾರಿ ಶರಣು ಗೋಗೇರಿ, ಜಿಲ್ಲಾ ಉಪಸಮನ್ವಯಾಧಿಕಾರಿ ಎಮ್.ಎಚ್.ಕಂಬ್ಳಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರಣು ಗೋಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮಹಬೂಬ ತುಂಬರಮಟ್ಟಿ, ಶಾಲಾ ಶಿಕ್ಷಕ ವೃಂದ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP