ನವದೆಹಲಿ, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ರೈತರು, ಮೀನುಗಾರರು ಮತ್ತು ಜಾನುವಾರು ಸಾಕಾಣಿಕೆದಾರರ ಕಲ್ಯಾಣವು ಭಾರತ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಇವರ ಹಕ್ಕುಗಳು ಮತ್ತು ಹಿತಾಸಕ್ತಿಗಳ ರಕ್ಷಣೆಗೆ ಕೇಂದ್ರ ಸರಕಾರ ಸಿದ್ಧವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಿದ್ದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಕೃಷಿ ವಿಜ್ಞಾನಕ್ಕೆ ಸಲ್ಲಿಸಿದ ಅಪೂರ್ವ ಕೊಡುಗೆಗಳನ್ನು ಸ್ಮರಿಸಿದರು.
ಭಾರತವು ತನ್ನ ಆಹಾರ ಪೂರೈಕೆದಾರರೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ, ಎಂದು ಸ್ಪಷ್ಟಪಡಿಸಿದರು. ಕೃಷಿ ಉತ್ಪಾದನೆ, ಜೀವವೈವಿಧ್ಯ, ಪೌಷ್ಟಿಕಾಂಶ ಭದ್ರತೆ ಮತ್ತು ತಂತ್ರಜ್ಞಾನಗಳ ಸಂಯೋಜನೆಯೊಂದಿಗೆ ಕೃಷಿಯಲ್ಲಿ ಹಸಿರು ಕ್ರಾಂತಿಯ ಹೊಸ ಅಧ್ಯಾಯ ಆರಂಭವಾಗಿದೆ ಎಂದರು.
ಎಂ.ಎಸ್. ಸ್ವಾಮಿನಾಥನ್ ಪ್ರಶಸ್ತಿ ಪ್ರಾರಂಭಿಸಿರುವುದಾಗಿ ಘೋಷಿಸಿ, ಈ ಪ್ರಶಸ್ತಿ ಅಭಿವೃದ್ಧಿಶೀಲ ರಾಷ್ಟ್ರಗಳ ವಿಜ್ಞಾನಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು. ಪ್ರಥಮ ಪ್ರಶಸ್ತಿ ನೈಜೀರಿಯಾದ ವಿಜ್ಞಾನಿಗೆ ಲಭಿಸಿದೆ.
ಭಾರತವು ಇಂದು ಅಕ್ಕಿ, ಗೋಧಿ, ಹತ್ತಿ, ತರಕಾರಿ ಹಾಗೂ ಮೀನು ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ಬಂದಿದೆ. ಪಿಎಂ-ಕಿಸಾನ್, ಪಿಎಂ-ಸಂಪಾದ, ಪಿಎಂ ಧನ್-ಧನ್ಯ ಯೋಜನೆಗಳ ಮೂಲಕ ರೈತರ ಆರ್ಥಿಕ ಬಲವರ್ಧನೆಗಾಗಿಯೇ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮುಂತಾದ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸುವಂತೆ ಅವರು ವಿಜ್ಞಾನಿಗಳಿಗೆ ಸಲಹೆ ನೀಡಿದರು. ಸಾಂಪ್ರದಾಯಿಕ ಜ್ಞಾನ ಹಾಗೂ ಆಧುನಿಕ ವಿಜ್ಞಾನದ ಸಮನ್ವಯದಿಂದ ಸಮಗ್ರ ಕೃಷಿ ವ್ಯವಸ್ಥೆ ಸಾಧ್ಯವೆಂದು ಪ್ರಧಾನಿ ಮೋದಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa