ವಿಜಯಪುರ, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ವಿಜಯಪುರ ನಗರದ ಶಿವಾಜಿ ಸರ್ಕಲ್ ಹತ್ತಿರ, ರಾಮನಗರ ರಸ್ತೆ, ನವಬಾಗ ರಸ್ತೆ, ಮನಗೂಳಿ ಅಗಸಿ, ಜುಮ್ಮಾ ಮಸೀದಿ, ಕಸ್ತೂರಿ ಕಾಲನಿ, ರೇಲ್ವೆ ಸ್ಟೇಶನ್ ಸೇರಿದಂತೆ ನಾನಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ನಗರದ ನಾನಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಗರದಾದ್ಯಂತ ಇರುವ ಕೋಟೆಗೋಡೆ ಆವರಣಗಳಲ್ಲಿ ಮಳೆ ನೀರು ನಿಲ್ಲದಂತೆ ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಮಾಡಬೇಕು. ಮುಳ್ಳು ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೋಟೆಗೋಡೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸೌಂದರ್ಯಿಕರಣಕ್ಕೆ ಒತ್ತು ನೀಡುವಂತೆ ಸೂಚಿಸಿದರು.
ಐತಿಹಾಸಿಕ ವಿಜಯಪುರ ನಗರಕ್ಕೆ ಪ್ರವಾಸಿಗರು ಆಗಮಿಸುತ್ತಿರುವುದರಿಂದ ನಗರದಾದ್ಯಂತೆ ಸ್ವಚ್ಛತೆಗೆ ಆದ್ಯತೆ ನೀಡಿ, ಅವಶ್ಯಕತೆ ಇದ್ದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಮಳೆ ನೀರು ಒಂದೆಡೆ ನಿಂತು ಪ್ರವಾಹ ಪರಿಸ್ಥಿತಿಯಾಗದಂತೆ ನೋಡಿಕೊಳ್ಳಲು ಅವಶ್ಯಕವಿದ್ದೆಡೆ ಮಳೆ ನೀರು ಚರಂಡಿ ನಿರ್ಮಿಸಲು ಯೋಜನೆ ರೂಪಿಸಿ ಶಾಶ್ವತ ಪರಿಹಾರ ಕಂಡು ಕೊಳ್ಳಲು ಸೂಕ್ತ ಕ್ರಿಯಾಯೋಜನೆ ರೂಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ನಗರದ ಇಂಡಿ ರಸ್ತೆಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಕಾರ್ಯನಿರ್ವಾಹಕ ಅಭಿಯಂತರ ವಿಠ್ಠಲ ಹೊನ್ನಳ್ಳಿ, ಆರೋಗ್ಯಾಧಿಕಾರಿ ಎಸ್.ಎಲ್.ಲಕ್ಕಣ್ಣವರ ಸೇರಿದಂತೆ ಪಾಲಿಕೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande