ಬೆಂಗಳೂರು, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಕ್ವಾಂಟಂ ಮಿಷನ್ ನಲ್ಲಿ ರಾಜ್ಯಗಳ ಪಾತ್ರ ಮಹತ್ವವಾಗಿದ್ದು, ಭಾರತ ದೇಶದ ಭವಿಷ್ಯದ ಆರ್ಥಿಕತೆ ಮತ್ತು ಭದ್ರತೆಯನ್ನು ರೂಪಿಸುವ ಕ್ವಾಂಟಂ ತಂತ್ರಜ್ಞಾನ ಅಭಿವೃದ್ದಿಯಲ್ಲಿ ರಾಜ್ಯಗಳ ಪಾತ್ರವನ್ನು ಇನ್ನಷ್ಟು ಹೆಚ್ಚಿಸುವಂತೆ ಸಂಸದ ಕುಮಾರ ನಾಯಕ್ ಅವರ ಆಗ್ರಹಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.
2025ರ ಆಗಸ್ಟ್ 11ರಂದು ಲೋಕಸಭೆಯಲ್ಲಿ ನಿಯಮ 377 ಅಡಿಯಲ್ಲಿ ಅಡಿಯಲ್ಲಿ ಈ ವಿಷಯವನ್ನು ಸಂಸದರು ಪ್ರಸ್ತಾಪಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಕೇಂದ್ರ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್, ಮಿಷನ್ ವಿನ್ಯಾಸದಲ್ಲೇ ರಾಜ್ಯಗಳ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಐಐಎಸ್‌ಸಿ ಬೆಂಗಳೂರು, ಐಐಟಿ ಮದ್ರಾಸ್, ಐಐಟಿ ಮುಂಬೈ ಮತ್ತು ಐಐಟಿ ದೆಹಲಿ—ಈ ನಾಲ್ಕು ಥೀಮಾಟಿಕ್ ಹಬ್‌ಗಳ ಹಬ್ ಗವರ್ನಿಂಗ್ ಬೋರ್ಡ್ ಗಳಲ್ಲಿ ಸಂಬಂಧಿತ ರಾಜ್ಯದ ಹಿರಿಯ ಅಧಿಕಾರಿಯೊಬ್ಬರನ್ನು ಸದಸ್ಯರಾಗಿ ಸೇರಿಸಲಾಗುತ್ತದೆ.
ಬೆಂಗಳೂರು ಐಐಎಸ್‌ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ವಾಂಟಂ ಕಂಪ್ಯೂಟಿಂಗ್ ಹಬ್ಗೆ ರಾಜ್ಯ ಸರ್ಕಾರದಿಂದ ಹಿರಿಯ ಅಧಿಕಾರಿಯೊಬ್ಬರನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸಚಿವರ ಈ ಭರವಸೆಯನ್ನು ಸಂಸದರಾದ ಕುಮಾರ ನಾಯಕ್ ಸ್ವಾಗತಿಸಿ, ರಾಜ್ಯಗಳ ಸಕ್ರಿಯ ಪಾಲ್ಗೊಳ್ಳುವಿಕೆ NQMಗೆ ವಿಶೇಷ ಮೌಲ್ಯ ತುಂಬಲಿದೆ. ಕೇಂದ್ರದ ಈ ಸ್ಪಷ್ಟನೆ, ರಾಜ್ಯ–ಕೇಂದ್ರ ಸಹಕಾರವನ್ನು ಬಲಪಡಿಸುವುದಷ್ಟೇ ಅಲ್ಲದೇ ಭಾರತದ ಮುಂದಿನ ವೈಜ್ಞಾನಿಕ ಕ್ರಾಂತಿಯ ಪ್ರಮುಖ ಹೆಜ್ಜೆಯಾಗಿದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa