ಮೈಸೂರು, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ತಾಯಿ ಚಾಮುಂಡೇಶ್ವರಿ ಒಳ್ಳೆ ಬುದ್ಧಿ ಕೊಡಲಿ. ಹಿಂದೂ ಶ್ರದ್ಧಾ ಕೇಂದ್ರಗಳನ್ನು ಗುರಿ ಮಾಡುವ ಮನೋಭಾವ ಬಿಡಲಿ ಎಂದರು.
ಭಾನು ಮುಷ್ತಾಕ್ ಅವರ ವಿರುದ್ಧ ತೀವ್ರ ಟೀಕೆ ಮಾಡಿದ ಅಶೋಕ್, ಅವರು ಕನ್ನಡ ಧ್ವಜ ಹಾಗೂ ಭುವನೇಶ್ವರಿ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಭುವನೇಶ್ವರಿ ಒಪ್ಪದವರು, ಚಾಮುಂಡೇಶ್ವರಿ ಹೇಗೆ ಒಪ್ಪುತ್ತಾರೆ? ಮೊದಲು ಕನ್ನಡಿಗರ ಕ್ಷಮೆ ಕೇಳಲಿ. 6 ಕೋಟಿ ಹಿಂದೂಗಳಲ್ಲಿ ಒಬ್ಬ ಸಾಧಕ ಸಿಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಮುಸ್ಲಿಮರ ಓಲೈಕೆಗಾಗಿ ತಂತ್ರ ಮಾಡುವ ಕಾಂಗ್ರೆಸ್, ಈಗ ಹಿಂದೂ ಭಾವನೆಗೆ ಧಕ್ಕೆ ತರುತ್ತಿದೆ. ಇದೇ ಕ್ರಮ ಮುಂದುವರಿದರೆ ಚಾಮುಂಡೇಶ್ವರಿ ಚಲೋ ಆಂದೋಲನ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa