ಹೊಸಪೇಟೆ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸರ್ಕಾರದ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳಲ್ಲಿನ ಗುಣಾತ್ಮಕ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಎಂ.ಎಸ್.ಎಂ.ಇ ಮತ್ತು ಗಣಿ) ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದ ಸಮೀರ್ ಶುಕ್ಲಾ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿರುವ ಅನುಭವ ಇರುವುದರಿಂದ ವಿಜಯನಗರ ಜಿಲ್ಲೆಯ ಬಗ್ಗೆ ಪೂರ್ಣ ಮಾಹಿತಿ ಇದೆ. ಪ್ರಗತಿ ಪರಿಶೀಲನೆ ಸಭೆಯಲ್ಲಿ ಇಲಾಖೆಗಳ ಅಧಿಕಾರಿಗಳು ದಾಖಲೆಯಲ್ಲಿರುವ ಅಂಕಿ ಅಂಶಗಳನ್ನು ವಾಚನ ಮಾಡುವ ಬದಲು ತಮ್ತಮ್ಮ ಇಲಾಖೆಗಳಲ್ಲಿನ ಸಮಸ್ಯೆಗಳನ್ನು ಮುಕ್ತವಾಗಿ ಸಭೆಯಲ್ಲಿ ಚರ್ಚಿಸಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುವ ಬಗ್ಗೆ ಮಾಹಿತಿ ಪಡೆದರು.
ಕುಡಿಯುವ ನೀರು ಪೂರೈಕೆಯಲ್ಲಿ ವಿಳಂಬ ಆಗದಂತೆ, ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಆನಾರೋಗ್ಯ ಪೀಡಿತರಾಗದಂತೆ ವಾಂತಿ ಭೇದಿ ಪ್ರಕರಣಗಳು, ಮಕ್ಕಳಲ್ಲಿ ಚರ್ಮ ಸಂಬಂಧಿತ ಸಮಸ್ಯೆಗಳು ಆಗದಂತೆ ನಿಗಾ ವಹಿಸಬೇಕು. ಹೆಚ್ಚು ನೈರ್ಮಲ್ಯತೆಗೆ, ಶುದ್ದ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ನಿಗದಿತ ವೇಳೆಗೆ ಸಮವಸ್ತ್ರ ವಿತರಣೆ, ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ವಾರ್ಡನ್‍ಗಳ ನಿಯೋಜನೆಗೆ ಗಮನ ಹರಿಸುವಂತೆ ಸೂಚಿಸಿದರು.
ಕೃಷಿ ಇಲಾಖೆ ಉಪನಿದೇರ್ಶಕ ನಯೀಮ್ ಪಾಷಾ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 53843 ಹೆಕ್ಟರ್ ನಷ್ಟು ನೀರಾವರಿ ಮತ್ತು ಖುಷ್ಕಿ 224218 ಹೆಕ್ಟರ್ ನಷ್ಟು ಸೇರಿ 278060 ರಷ್ಟು ಬಿತ್ತನೆಯಾಗಿದೆ. ಒಟ್ಟು ವಿವಿಧ ರಸಗೊಬ್ಬರಗಳ ಬೇಡಿಕೆ ಅನುಸಾರ ಸರಬರಾಜು ಮತ್ತು ದಾಸ್ತಾನು ಮಾಡಲಾಗಿದೆ. ಯೂರಿಯಾ, ಡಿಎಪಿ, ಎಂಒಪಿ, ಎನ್‍ಪಿಕೆ, ಎಸ್‍ಎಸ್‍ಪಿ ಸೇರಿ ಒಟ್ಟು 111595 ಮೆಟ್ರಿಕ್ ಟನ್‍ಗಳಷ್ಟು ಬೇಡಿಕೆ ಇತ್ತು, 87014 ಮೆಟ್ರಿಕ್ ಟನ್ ಒಟ್ಟು ದಾಸ್ತಾನು ಪಡೆದು, 69972 ಮೆಟ್ರಿಕ್ ಟನ್‍ಗಳಷ್ಟು ವಿತರಣೆ ಮಾಡಲಾಗಿದೆ. ಸದ್ಯಕ್ಕೆ 17042 ಮೆಟ್ರಿಕ್ ಟನ್‍ಗಳು ದಾಸ್ತಾನು ಲಭ್ಯವಿದೆ ಎಂದು ಸಭೆಗೆ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಲ್.ಆರ್.ಶಂಕರನಾಯ್ಕ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಒಟ್ಟು 66 ತಜ್ಞ ವೈದ್ಯರ ಕೊರತೆ ಇದೆ. ಅದರಲ್ಲೂ ಅನೆಸ್ತೇಷಿಯಾ ವೈದ್ಯರ ಅಗತ್ಯವಿದೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಈಗಾಗಲೇ ಹೊರಗುತ್ತಿಗೆ ಅಧಾರದಲ್ಲಿ ವೈದ್ಯರ ನೇಮಕಾತಿಗೆ ಅರ್ಜಿ ಅಹ್ವಾನಿಸಿದರು ಸೇವೆಗೆ ಮುಂದಾಗುತ್ತಿಲ್ಲ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಹೊಸಪೇಟೆ ಸಹಾಯಕ ಆಯುಕ್ತ ಪಿ.ವಿವೇಕಾನಂದ, ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ಜಿಲ್ಲೆಯ ಎಲ್ಲಾ ತಹಶೀಲ್ದಾರರು, ತಾಪಂ ಇಒಗಳು ಸೇರಿದಂತೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್