ಬಳ್ಳಾರಿ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕರ್ನಾಟಕದ ಶಿಕ್ಷಣ ಮತ್ತು ಸ್ವಾವಲಂಬನೆಯ ಸ್ವಾತಂತ್ರ್ಯದ ಬದುಕಿಗೆ ಹಾನಗಲ್ಲು ಶೀಗುರು ಕುಮಾರೇಶ್ವರರು ಹಾಗೂ ಜಗದ್ಗುರು ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಕೊಡುಗೆ ಅನನ್ಯವಾದುದು ಎಂದು ಸಹ ಪ್ರಾಧ್ಯಾಪಕರಾದ ಡಾ. ಸಿ. ಕೊಟ್ರೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ಹಾನಗಲ್ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಹಯೋಗದಲ್ಲಿ - ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪರಮ ಪೂಜ್ಯ ಜಗದುರು ಶ್ರೀ ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸ್ಮರಣೆ, ಸಂಸ್ಥಾಪಕರ ದಿನಾಚರಣೆ ಹಾಗೂ ಸೇವಾ ದೀಕ್ಷೆ ಸಮಾರಂಭದಲ್ಲಿ ಸುತ್ತೂರು ಶ್ರೀಗಳ ಶೈಕ್ಷಣಿಕ ಸೇವೆ ಈ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಸುತ್ತೂರು ಸಂಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಸಂಸ್ಥಾನಕ್ಕೆ 23ನೇ ಪೀಠಾಧಿಪತಿಗಳಾಗಿ ಬಂದ ಶ್ರೀಗಳು ಜೆಎಸ್ಎಸ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಶಾಲಾ - ಕಾಲೇಜುಗಳನ್ನು ತೆರೆದು ಅಕ್ಷರದ ಮೂಲಕ ಸಮಾಜದ - ದೇಶದ ಸರ್ವಾಂಗೀಣ ಅಭಿವೃದ್ಧಿ - ಬೆಳವಣಿಗೆ ಹಾಗೂ ಸದೃಢತೆಗೆ ದುಡಿದರು ಎಂದರು.
ಹಾನಗಲ್ಲು ಕುಮಾರೇಶ್ವರರು ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ, ಭಕ್ತರಿಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿಯನ್ನೇ ಮೂಡಿಸಿದ್ದಾರೆ. ಈ ಮಹನೀಯರ ಸ್ಮರಣೆ ನಮ್ಮೆಲ್ಲರ ಸಾರ್ಥಕ ಜೀವನದ ಆಶಯವಾಗಬೇಕು ಎಂದರು.
ಶ್ರೀ ಮನಿಪ್ರ ಕಲ್ಯಾಣ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ, ಹಾನಗಲ್ಕು ಕುಮಾರೇಶ್ವರರು ಮತ್ತು
ಸುತ್ತೂರು ಶ್ರೀಗಳ ಸೇವೆಯನ್ನು ಸ್ಮರಿಸಿ, ಈ ಇಬ್ನರೂ ಶಿಕ್ಷಣ ಪ್ರತಿಯಿಬ್ಬರಿಗೂ ಸಿಗಬೇಕು ಎಂದು ಸಂಕಲ್ಪ ಹೊಂದಿದ್ದರು ಎಂದರು.
ಶ್ರೀ ಹಾನಗಲ್ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಪಲ್ಲೇದ ಪ್ರಭುಲಿಂಗ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅದ್ಯಕ್ಷರಾಗಿರುವ ಸಿದ್ಧರಾಮ ಕಲ್ಮಠ ಅವರು ಪ್ರಸ್ತಾವಿಕ ಭಾಷಣ ಮಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾವಯವ ಕೃಷಿಯ ಬಿ.ಎಂ. ವೀರಪ್ಪಯ್ಯ, ರಂಗಭೂಮಿಯ ಶ್ರೀಮತಿ ಜಯಶ್ರೀ ಪಾಟಿಲ್, ಹಿರಿಯ ಪತ್ರಕರ್ತ ಎನ್. ವೀರಭದ್ರಗೌಡ, ಮಹಾದಾನಿ
ಮಸೂದಿಪುರದ ಸಿದ್ಧರಾಮನಗೌಡ, ನೃತ್ಯದ ಜಿಲಾನಿಭಾಷ, ಕಲಾವಿದ ಮಂಜುನಾಥ ಗೋವಿಂದವಾಡ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ವೀರಶೈವ ವಿದ್ಯಾವರ್ಧಕ ಸಂಸದ ಮಾಜಿ ಕೋಶಾಧಿಕಾರಿಗಳಾದ ಎಸ್. ಹಿಮಂತರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಬಾಣಾಪುರದ ಜಡೇಸಿದ್ಧನಗೌಡ, ವೀರಶೈವ ಸಮಾಜದ ಮುಖಂಡ ವೀಭೂತಿ ಎರಿಸ್ವಾಮಿ ಅವರು ವೇದಿಕೆಯಲ್ಲಿದ್ದರು.
ಕಾಲೇಜಿನ ಪ್ರಾಚಾರ್ಯ ಶ್ರೀಶೈಲಗೌಡ ಅವರು ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀಮತಿ ಡಿ. ಸುಮ ಮತ್ತು ಎ.ಎಂ.ಪಿ. ವೀರೇಶಸ್ವಾಮಿ ಅವರು ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್